ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾದ ಚನ್ನಪಟ್ಟಣದ ಪೆಟ್ಟಾ ಶಾಲೆ

IMG-20240126-WA0018
Published on

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ತನ್ನ ವಿದ್ಯಾರ್ಥಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂಬ ಹೆಗ್ಗಳಿಕೆಯನ್ನು ಈ ಶಾಲೆ ಹೊಂದಿದೆ. ಆದರೆ, ಸದ್ಯ ಸಾವಿರಾರು ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಕೇಂದ್ರವಾಗಿದ್ದ ಈ ಶಾಲೆ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಹತ್ತಾರು ಸಮಸ್ಯೆಗಳಿಂದ ನಲುಗುತ್ತಿದೆ.

ನಗರದ ಡ್ಯೂಂ ಲೈಟ್ ಸರ್ಕಲ್ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪೆಟ್ಟಾ) ಅತ್ಯಂತ ಹಳೆಯ ಪಾಠಶಾಲೆ ಎಂಬ ಹೆಗ್ಗಳಿಕೆ ಹೊಂದಿದೆ. 1947ರಲ್ಲಿ ಆರಂಭಗೊಂಡ ಈ ಶಾಲೆ ಹಲವಾರು ಪ್ರತಿಭೆಗಳನ್ನು ಸಮಾಜಕ್ಕೆ ಕೊಡುಗೆ ನೀಡಿದೆ. ಮೊನ್ನೆಯಷ್ಟೇ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಖ್ಯಾತ ಮನೋತಜ್ಞ ಡಾ. ಸಿ.ಆರ್. ಚಂದ್ರಶೇಖರ್ ಅವರು ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದು ಇದೇ ಶಾಲೆಯಲ್ಲಿ. ಪೆಟ್ಟಾ ಶಾಲೆಯೆಂದೇ ಖ್ಯಾತಿಗಳಿಸಿರುವ ಈ ಶಾಲೆ ಪ್ರಸ್ತುತ ಅವ್ಯವಸ್ಥೆಯ ಅಗರವಾಗಿದ್ದು, ಸಮಸ್ಯೆಗಳು ತಾಂಡವವಾಡುತ್ತಿವೆ.

1ರಿಂದ 7ನೇ ತರಗತಿವರೆಗೆ ಪ್ರಸ್ತುತ 142 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಶಾಲೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಭಯದ ನೆರಳಿನಲ್ಲಿ ಮಕ್ಕಳು ಪಾಠ ಪ್ರವಚನ ಕೇಳುವ ಅನಿವಾರ್ಯತೆ ನಿರ್ಮಾಣವಾಗಿದೆ. ಇತ್ತೀಚೆಗೆ ನಿರ್ಮಿಸಿರುವ ಮೂರು ಕೊಠಡಿಗಳು ಮಾತ್ರ ಸುಸಜ್ಜಿತವಾಗಿವೆ. ಉಳಿದಂತೆ ಕೊಠಡಿಗಳ ಮೇಲ್ಛಾವಣಿ ಉದುರುತ್ತಿದ್ದು, ಕಟ್ಟಡ ಯಾವಾಗ ಬೇಕಾದರೂ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಶಾಲೆಗೆ ವಿಸ್ತಾರವಾದ ಜಾಗವಿದೆ. ಆದರೆ, ಭದ್ರತೆ ಎಂಬುದು ಗಗನಕುಸುಮವಾಗಿದೆ. ಶಾಲಾ ಆವರಣಕ್ಕೆ ಕಾಂಪೌಂಡ್ ಇಲ್ಲವಾಗಿದ್ದು, ತ್ಯಾಜ್ಯ ವಿಲೇವಾರಿ ತಾಣವಾಗಿ ಬದಲಾಗಿದೆ. ಶಾಲೆಯ ದುಸ್ಥಿತಿಯನ್ನು ವಿರೋಧಿಸಿ ಈಗಾಗಲೇ ವಿದ್ಯಾರ್ಥಿಗಳು, ಪಾಲಕರು ಪ್ರತಿಭಟನೆ ಸಹ ನಡೆಸಿದ್ದಾರೆ. ಆದರೆ, ಅವ್ಯವಸ್ಥೆ ಸರಿಪಡಿಸಲು ಸಂಬಂಧಿಸಿದವರು ಇದುವರೆಗೂ ಮುಂದಾಗಿಲ್ಲ.

ಖಾತೆಯೂ ಇಲ್ಲ!

ಆರಂಭದಲ್ಲಿ ಈ ಶಾಲೆ ಕುಡಿನೀರು ಕಟ್ಟೆ ಬಳಿ ಆರಂಭಗೊಂಡಿತ್ತು. ತದನಂತರ, 1965ರಲ್ಲಿ ಈಗಿರುವ ಜಾಗಕ್ಕೆ ಸ್ಥಳಾಂತರಗೊಂಡಿತು. ಶಾಲೆಗೆ 4 ಎಕರೆಯಷ್ಟು ವಿಶಾಲವಾದ ಜಾಗವಿದ್ದು, ಇದುವರೆಗೂ ಈ ಜಾಗಕ್ಕೆ ಖಾತೆ ಆಗಿಲ್ಲ. ಶಾಲಾ ಆವರಣಕ್ಕೆ ಹದ್ದುಬಸ್ತು ಇಲ್ಲದೆ ತ್ಯಾಜ್ಯ ವಿಲೇವಾರಿ ನಡೆಯುತ್ತಿದೆ. ಜತೆಗೆ ಅನೈತಿಕ ಚಟುವಟಿಕೆಯ ತಾಣವಾಗಿಯೂ ಬದಲಾಗಿದೆ. ಶಾಲಾ ಆವರಣದಲ್ಲಿ ತ್ಯಾಜ್ಯವನ್ನು ಬೇಕಾಬಿಟ್ಟಿ ಸುರಿಯುತ್ತಿರುವ ಕಾರಣ ಶೈಕ್ಷಣಿಕ ಪೂರಕ ವಾತಾವರಣ ಹದಗೆಟ್ಟಿದೆ. ಇದರೊಂದಿಗೆ, ಈ ಜಾಗ ಕಬಳಿಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕೂಡಲೇ ಸಂಬಂಧಿಸಿದವರು ಶಾಲೆಯ ಜಾಗಕ್ಕೆ ಖಾತೆ ಮಾಡಿಕೊಡುವ ಜತೆಗೆ ರಕ್ಷಣೆಗೂ ಅಗತ್ಯಕ್ರಮ ಕೈಗೊಳ್ಳಬೇಕಿದೆ.

ಮಕ್ಕಳಿಗೆ ಕಸ ಆಯುವ ಸ್ಥಿತಿ

ಓದುವ ಕನಸು ಹೊತ್ತು ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಈ ಶಾಲೆಗೆ ದಾಖಲಾಗಿದ್ದಾರೆ. ಆದರೆ, ಶಾಲಾ ಆವರಣದಲ್ಲಿ ಹಾಗೂ ಎದುರು ತ್ಯಾಜ್ಯ ಸುರಿಯುವ ಕಾರಣ, ಆ ತ್ಯಾಜ್ಯವೆಲ್ಲ ಗಾಳಿ ಬಂದಾಗ ಶಾಲೆಯ ಕೊಠಡಿಗಳಿಗೆ ತೂರಿ ಬರುತ್ತದೆ. ಹಾಗಾಗಿ ಮಕ್ಕಳಿಗೆ ಈ ಕಸವನ್ನು ಆಯುವುದೇ ಕೆಲಸವಾಗಿದೆ. ಇದಕ್ಕೆ ಶಿಕ್ಷಕರೂ ಹೊರತಲ್ಲ. ಅವರು ಸಹ ಮಕ್ಕಳೊಡನೆ ಕಸ ಗುಡಿಸುವ ಕೆಲಸ ಮಾಡುತ್ತಾರೆ. ಇನ್ನಾದರೂ, ಸಂಬಂಧಿಸಿದವರು ಶಾಲೆಯ ಅಭಿವೃದ್ಧಿಗೆ ಕಾಳಜಿ ತೋರಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.

ನಮ್ಮ ಶಾಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಶಾಲೆಗೆ ಭದ್ರತೆ ಇಲ್ಲ, ಕಟ್ಟಡಗಳು ಶಿಥಿಲಗೊಂಡಿವೆ. ಇದುವರೆಗೂ ಶಾಲಾ ಜಾಗಕ್ಕೆ ಖಾತೆ ಆಗಿಲ್ಲ. ಆವರಣದಲ್ಲಿ ತ್ಯಾಜ್ಯ ಸುರಿಯಲಾಗುತ್ತದೆ. ಕಸ ಹಾಕುವುದನ್ನು ತಡೆಗಟ್ಟಲು ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಅದನ್ನು ಸಹ ಕಿತ್ತುಕೊಂಡು ಹೋಗಿದ್ದಾರೆ. ಶಾಲೆಯ ಸಮಸ್ಯೆ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರಲಾಗಿದೆ.ಚೆಲುವರಾಜು, ಮುಖ್ಯಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net