ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ

Published on

*ಜೋಡುಗಟ್ಟೆ ಸಾಮಾಜಿಕ ಹೋರಾಟಗಾರನಿಂದ ಪತ್ರ

*ಸರ್ಕಾರಿ ಕಚೇರಿಗಳ ಅವ್ಯವಸ್ಥೆಗೆ ಬೇಸತ್ತು ನಿರ್ಧಾರ

ಮಾಗಡಿ

ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಅವ್ಯವಸ್ಥೆಗೆ ಬೇಸರಗೊಂಡ ಸಾಮಾಜಿಕ ಹೋರಾಟಗಾರರೊಬ್ಬರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿಸಲ್ಲಿಸಿದ್ದಾರೆ.

ಸಾರ್ವಜನಿಕರಿಗೆ ಕೆಲಸ ಕಾರ್ಯ ಮಾಡಿಕೊಡುತ್ತಿಲ್ಲ, ಸೌಲತ್ತುಗಳು ಸಮರ್ಪಕವಾಗಿ ತಲುಪಿಸದೆ ದುರ್ಬಳಕೆ ಮಾಡುತ್ತಿರುವುದನ್ನು ಕಂಡು ಸಹಿಸಲಾಗದೆ ಮನನೊಂದು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿಸಲ್ಲಿಸಿರುವುದಾಗಿ ಸಾಮಾಜಿಕ ಹೋರಾಟಗಾರ ಜೋಡುಗಟ್ಟೆ ನಾಗರಾಜು ಮಾಹಿತಿ ಹಂಚಿಕೊಂಡಿದ್ದಾರೆ.

ತಾಲೂಕಿನ ಕಂದಾಯ ಇಲಾಖೆ, ಪೊಲೀಸ್​ ಇಲಾಖೆ ಸರ್ಕಾರಿ ಆಸ್ಪತ್ರೆ, ಗ್ರಾಪಂ ಕಚೇರಿಗಳಲ್ಲಿ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ನಾಗರಿಕರಿಗೆ ಸರ್ಕಾರದ ಸೌಲತ್ತುಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸುತ್ತಾರೆ. ಇಲಾಖೆಗಳಲ್ಲಿ ನಡೆಯುವ ಎಲ್ಲ ಅಕ್ರಮಗಳಿಗೆ ಅಧಿಕಾರಿಗಳೆ ನೇರಹೊಣೆಯಾಗಿದ್ದು, ಕೆಲವೊಂದು ದಾಖಲೆಗಳಿಗಾಗಿ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದರೆ ತಿಂಗಳುಗಳೇ ಕಳೆದರೂ ದಾಖಲಾತಿ ನೀಡುವುದಿಲ್ಲ. ಈ ಬಗ್ಗೆ ಇಲಾಖೆಯ ಮುಂದೆ ಉಪವಾಸ ಸತ್ಯಾಗ್ರಹ, ಅಹೋ ರಾತ್ರಿ ಸತ್ಯಾಗ್ರಹ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಸಾಮಾನ್ಯ ಜನರಿಗೆ ಇಲಾಖೆಗಳಲ್ಲಿ ಗೌರವ ಸಿಗುತ್ತಿಲ್ಲ. ಬಲಾಢ್ಯರ ಪರವಾಗಿ ಅಧಿಕಾರಿಗಳಿದ್ದು, ಇದರಿಂದ ಸಾಕಷ್ಟು ಮಂದಿಗೆ ಅನ್ಯಾಯವಾಗುತ್ತಿದೆ, ಸಂಬಂದಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರೆ ಬೆದರಿಕೆಹಾಕುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ಜೀವಿಸಲು ನನ್ನಿಂದ ಕಷ್ಟವಾಗುತ್ತಿದೆ. ತಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ, ಮುಗ್ಧ ಜನತೆಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದರೆ ದಯಾಮರಣಕ್ಕೆ ಸಮ್ಮತಿಸಿ ನನಗೆ ಮುಕ್ತಿ ನೀಡಬೇಕು. ಈ ಅರ್ಜಿ ತಲುಪಿದ 15 ದಿನಗಳ ಒಳಗೆ ನ್ಯಾಯ ಸಿಗದಿದ್ದರೆ ನೀವು ದಯಾಮರಣ ನೀಡದಿದ್ದರೂ ಡಿ.23ರಿಂದ ಹಂಚಿಕುಪ್ಪೆ ಗ್ರಾಪಂ ಕಚೇರಿ ಆವರಣದಲ್ಲಿ ಉಸಿರು ಹೋಗುವವರೆಗೂ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net