

ಬೆಂಗಳೂರು: ರಾಜಧಾನಿಯಲ್ಲಿ ಸಾಕು ನಾಯಿ ಪರವಾನಗಿ ಉಪವಿಧಿಯನ್ನು(ಬೈಲಾ) ಪರಿಷ್ಕರಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. 2021ರಲ್ಲಿ ರಚಿಸಿರುವ ಹಳೆಯ ಬೈಲಾವನ್ನು ರದ್ದುಗೊಳಿಸಿ ಹೊಸದಾಗಿ ಕರಡು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ ಆಲೋಚಿಸಿದೆ. ನಾಯಿ ಸಾಕುವವರು ಪರವಾನಗಿ ಪಡೆಯುವುದನ್ನು ಕಡ್ಡಾಯವಾಗಿ ಜಾರಿಗೊಳಿಸುವ ಬಗ್ಗೆ ಅಂಶ ಸೇರಿಸಲಾಗಿದೆ ಎನ್ನಲಾಗಿದೆ. ಹಿಂದಿನ ಬೈಲಾದಲ್ಲಿದ್ದ ಕೆಲ ಅಂಶಗಳನ್ನು ತೆಗೆದುಹಾಕಿ ಶುಲ್ಕ ನಿಗದಿ ಸೇರಿ ಹೊಸ ಅಂಶಗಳನ್ನು ಸೇರಿಸಿ ಸರಳೀಕರಣಗೊಳಿಸಲು ಬಿಬಿಎಂಪಿ ಮುಂದಾಗಿದೆ.
2021ರಲ್ಲಿ ಪಾಲಿಕೆಯ ಪಶುವೈದ್ಯಕೀಯ ವಿಭಾಗದ ಅಧಿಕಾರಿಗಳು ‘ಸಾಕು ನಾಯಿ ಪರವಾನಗಿ ಬೈಲಾ ರಚಿಸಿ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಾರ್ವಜನಿಕ ಪ್ರದೇಶಗಳಲ್ಲಿ ಸಾಕು ನಾಯಿಗಳು ಗಲೀಜು ಮಾಡಿದರೆ ಅದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ನಾಯಿಗೆ ಕಡ್ಡಾಯವಾಗಿ ಸಂತಾನಶಕ್ತಿ ಹರಣ ಶಸಚಿಕಿತ್ಸೆ ಮಾಡಿರಬೇಕು. ನಾಯಿಗಳನ್ನು ಕರೆದೊಯ್ಯುವಾಗ ಸಾರ್ವಜನಿಕರಿಗೆ ಕಚ್ಚಿದಂತೆ ಮುಂಜಾಗ್ರತಾ ವಹಿಸಬೇಕು. ನಾಯಿಗೆ ಮೈಕ್ರೊಚಿಪ್ ಅಳವಡಿಸಬೇಕು. ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಉಂಟಾಗುವುದನ್ನು ತಪ್ಪಿಸಲು ಅಪಾರ್ಟ್‌ಮೆಂಟ್ ಮತ್ತು ವಿಲ್ಲಾಗಳಲ್ಲಿ ಅಕ್ರಮಣಕಾರಿ ನಾಯಿಗಳನ್ನು ಸಾಕಾದಂತೆ ನಿರ್ಬಂಧ ಸೇರಿ ಇತರೆ ಅಂಶಗಳನ್ನು ಕರಡಿನಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಇದುವರೆಗೆ ಸರ್ಕಾರಕ್ಕೆ ಅನುಮೋದನೆ ಕೊಟ್ಟಿಲ್ಲ. ಈ ಸಂದರ್ಭದಲ್ಲಿ ಪ್ರಾಣಿಪ್ರಿಯರು, ಕೆಲವರು ‘ಸಾಕು ನಾಯಿ ಪರವಾನಗಿಗೆ ವಿರೋಧ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಇಂಥ ಕ್ರಮಗಳು ಬೇಕಿತ್ತು ಎನ್ನುವ ಮೂಲಕ ಪಾಲಿಕೆ ಕ್ರಮವನ್ನು ಸ್ವಾಗತಿಸಿದ್ದರು. ವಿದೇಶಿ ತಳಿಗಳ ನಾಯಿ ಮರಿ ಸಾಕಿ ಮಾರಾಟ ಮಾಡುತ್ತಿರುವವರಿಗೆ ಕಡಿವಾಣ ಹಾಕಬೇಕು ಎಂದು ಅನೇಕರ ಅಭಿಪ್ರಾಯಪಟ್ಟಿದ್ದರು.
ಅಲ್ಲದೆ, 2012ರಲ್ಲಿಯೇ ಪಾಲಿಕೆ ವ್ಯಾಪ್ತಿಯಲ್ಲಿ ನಾಯಿ ಸಾಕಣೆಗೆ ಸಂಬಂಧಿಸಿದ ಕರಡು ರೂಪಿಸುವ ಪ್ರಯತ್ನ ನಡೆದಿತ್ತು.ಆದರೆ, ಇದು ಜಾರಿಯಾಗಲಿಲ್ಲ. 2018ರಲ್ಲಿ ಈ ಹಳೆಯ ಬೈಲಾವನ್ನು ಪರಿಷ್ಕರಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಕೆಲವರು ಹಾಗೂ ಸಂಘ ಸಂಸ್ಥೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. 2021ರಲ್ಲಿಯೂ ಹಳೆಯ ಬೈಲಾವನ್ನು ತಿದ್ದುಪಡಿ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಇದುವರೆಗೆ ಸರ್ಕಾರ ಅನುಮೋದನೆ ಕೊಟ್ಟಿಲ್ಲ. ಈಗ ಮತ್ತೆ ಪಾಲಿಕೆಯು ಹೊಸ ಬೈಲಾ ತಯಾರಿಸಿ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಲು ಮುಂದಾಗಿದೆ.
ಪ್ರಾಣಿಪ್ರಿಯರ ಆಕ್ಷೇಪ:
ಹಿಂದೆ ಸರ್ಕಾರಕ್ಕೆ ಸಲ್ಲಿಸಿರುವ ಬಿಬಿಎಂಪಿ ಪೆಟ್ ಲೈಸೆನ್ಸ್ ಕರಡು ಅಕ್ರಮವಾಗಿದ್ದು, ಇದನ್ನು ತಕ್ಷಣ ಹಿಂಪಡೆಯಬೇಕು. ಸಾಕುಪ್ರಾಣಿಗಳ ವಿಷಯದಲ್ಲಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ) ಶಾಸನಬದ್ಧ ಸಂಸ್ಥೆಯಾಗಿದೆ. ಸಾಕು ಪ್ರಾಣಿಗಳ ಸಂಬಂಧಪಟ್ಟಂತೆ ನಿಬಂಧನೆ ತೆಗೆದುಕೊಳ್ಳುವ ಅಧಿಕಾರ ಆ ಸಂಸ್ಥೆಗಿದೆ. ಪ್ರತಿ ಕುಟುಂಬಕ್ಕೆ ನಾಯಿಗಳ ಸಂಖ್ಯೆಯನ್ನು ನಿರ್ಬಂಧಿಸುವ ಯಾವುದೇ ಮಾರ್ಗಸೂಚಿಯನ್ನು ಎಡಬ್ಲ್ಯುಬಿಐ ಹೊರಡಿಸಿಲ್ಲ. ಹೀಗಿದ್ದರೂ, ಬಿಬಿಎಂಪಿ ಪ್ರತಿ ಮನೆಗೆ ಮೂರು ನಾಯಿ ಸಾಕಲು ಸೀಮಿತಗೊಳಿಸಿದೆ. ಪಾಲಿಕೆಯ ಹೊಸ ಬೈಲಾದಲ್ಲಿ ಎಲ್ಲ ಷರತ್ತುಗಳನ್ನು ಬದಲಾಯಿಸಬೇಕು ಎಂದು ಪ್ರಾಣಿಪ್ರಿಯರ ಒತ್ತಾಯವಾಗಿದೆ.