ಸಹಪಠ್ಯ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನ

HUN-AUG-1-1(PU COLLEGE PROGRAMME)
ಹುಣಸೂರು ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ ಸಹಪಠ್ಯ ಚಟುವಟಿಕಗಳ ಉದ್ಘಾಟನಾ ಸಮಾರಂಭವನ್ನು ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಆರ್.ರಾಶಿ ಉದ್ಘಾಟಿಸಿದರು. ಪ್ರಾಂಶುಪಾಲೆ ಎನ್.ಬಿ.ಸುಧಾಮಣಿ, ಶಾಂತರಾಜು, ಚಲುವೆ ಅರಸ್, ಡಾ.ನೀಗೂ ರಮೇಶ್ ಇತರರಿದ್ದಾರೆ.
Published on

ಹುಣಸೂರು: ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಗಳಾಗಿವೆ ಎಂದು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಆರ್.ರಾಶಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ಹೊಸ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪಿಯು ವ್ಯಾಸಂಗದ ವೇಳೆ ಮನಸ್ಸು ಮತ್ತು ದೇಹ ಚಂಚಲತೆಯತ್ತ ವಾಲುವ ಸಂಕೀರ್ಣ ಸಮಯವಾಗಿದೆ. ದೇಹವೆಂಬ ಈ ತೋಟವನ್ನು ಮನಸ್ಸು ಎಂಬ ಗುದ್ದಲಿಯ ಮೂಲಕ ಭ್ರಾಂತಿ ಎಂಬ ಬೇರುಗಳನ್ನು ಕಿತ್ತೊಗೆದಲ್ಲಿ ಮಾತ್ರ ಆರೋಗ್ಯಪೂರ್ಣ ಸಸಿಯಾಗಿ ಬೆಳೆಯಬಲ್ಲದು. ಈ ವಯೋಮಾನದಲ್ಲಿ ಮಕ್ಕಳಲ್ಲಿ ಗೂಳಿಶಕ್ತಿಯೇ ತುಂಬಿರುತ್ತದೆ. ಆದರೆ, ಆ ಶಕ್ತಿಯ ಸದ್ಬಳಕೆ ಮಾಡಿಕೊಳ್ಳಲು ಎಡವುತ್ತಾರೆ ಎಂದರು.

ಪಠ್ಯಪುಸ್ತಕಗಳ ಜತೆಗೆ ಸಹಪಠ್ಯಗಳ ಚಟುವಟಿಕಗಳಲ್ಲಿ ಭಾಗವಹಿಸಿದಾಗ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ. ನಮ್ಮ ಸುತ್ತಮುತ್ತಲ ಸಮಾಜದ ವಾತಾವರಣ, ಕಷ್ಟನಷ್ಟಗಳನ್ನು ಅರಿಯುವ, ಸಮುದಾಯಕ್ಕೆ ನಿಮ್ಮನ್ನು ತೆರೆದುಕೊಳ್ಳಲು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯವಶ್ಯ. ಸಾಂಸ್ಕೃತಿಕ ಕ್ಷೇತ್ರ ನಿಮ್ಮಲ್ಲಿ ಸನ್ನಡತೆ, ಪ್ರಬುದ್ಧತೆಯನ್ನು ತಂದುಕೊಟ್ಟರೆ, ಕ್ರೀಡೆಯ ಮೂಲಕ ಸಂಘಟನೆ, ಸಹಬಾಳ್ವೆ, ನಾಯಕತ್ವ ಎಲ್ಲವನ್ನೂ ಕಲಿಯಲಿದ್ದೀರಿ. ಜ್ಞಾನದ ಬೇರುಗಳು ಗಟ್ಟಿಯಾದಲ್ಲಿ ಮರ ಸದೃಢವಾಗಿ ಉಳಿಯಲು ಸಾಧ್ಯ. ಹಾಗಾಗಿ, ಸಹಪಠ್ಯಗಳಲ್ಲಿ ಭಾಗವಹಿಸಿ ಆಸಕ್ತಿಯ ಕ್ಷೇತ್ರವನ್ನು ಆಯ್ದುಕೊಳ್ಳಿ ಎಂದು ಸಲಹೆ ನೀಡಿದರು.

ಪ್ರಾಂಶುಪಾಲೆ ಎನ್.ಬಿ.ಸುಧಾಮಣಿ ಮಾತನಾಡಿ, ಕಾಲೇಜಿನ ವಾತಾವರಣ ಆರೋಗ್ಯಪೂರ್ಣವಾಗಿರಲು ಸಹಪಠ್ಯ ಚಟುವಟಿಕೆಗಳು ಅವಶ್ಯವಾಗಿದ್ದು, ವಿದ್ಯಾರ್ಥಿಗಳು ಹಿಂಜರಿಯದೆ ಎಲ್ಲದರಲ್ಲೂ ಪಾಲ್ಗೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕೆಂದು ತಿಳಿಸಿದರು.

ಕಳೆದ ಸಾಲಿನಲ್ಲಿ ಹೆಚ್ಚಿನ ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡಸಲಾಯಿತು. ನೂತನವಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತಿಸಲಾಯಿತು. ಪ್ರಾಧ್ಯಾಪಕರಾದ ಚಲುವೆ ಅರಸ್, ಎಚ್.ಆರ್.ಶಾಂತರಾಜು, ಧರ್ಮೇಗೌಡ, ಬಿ.ಎಂ.ಗೀತಾ, ಡಾ.ನೀಗೂ ರಮೇಶ್, ಡಾ.ಎಸ್.ಎನ್.ಧರಣೇಂದ್ರಪ್ಪ, ಸಿ.ಇ.ವಿಜಯಕುಮಾರ್, ವಿದ್ಯಾರ್ಥಿ ಪ್ರತಿನಿಧಿಗಳಾದ ಮದುಸೂಧನ್, ಮಣಿಕಂಠ, ಅಭಿಷೇಕ್, ನಿಶಾಂತ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net