

ಚನ್ನರಾಯಪಟ್ಟಣ: ಸಂಗೀತ, ಕಲೆ, ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ತಿಳಿಸಿದರು.
ಪಟ್ಟಣದ ಕರ್ನಾಟಕ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೇಷ್ಠ ಸಾಹಿತಿ, ಡಾ.ಎಚ್.ಎಸ್. ವೆಂಕಟೇಶಮೂರ್ತಿ ಸ್ಮರಣಾರ್ಥ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಡಾ.ಎಚ್‌ಎಸ್‌ವಿ ರಚನೆಯ ಗೀತಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸ್ಪರ್ಧೆಯಲ್ಲಿ ಸೋಲು, ಗೆಲುವು ಸಾಮಾನ್ಯವಾದದ್ದು. ಸೃಜನಶೀಲ ಚಟುವಟಿಕೆಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸದಾ ಚಟುವಟಿಕೆಯಿಂದಿರಬಹುದು ಎಂದರು.
ಇತ್ತೀಚೆಗೆ ಕಾದಂಬರಿ ಆಧಾರಿತ ಸಿನಿಮಾಗಳು ಕಡಿಮೆಯಾಗುತ್ತಿವೆ. ಸದಭಿರುಚಿಯ ಸಿನಿಮಾಗಳು ಹೆಚ್ಚಾಗಬೇಕು. ಸಮಾಜಸೇವೆ ಜೀವನದ ಭಾಗವಾಗಬೇಕು. ನಕಾರಾತ್ಮಕ ಧೋರಣೆ ಸಲ್ಲದು. ವಿದ್ಯಾರ್ಥಿ ದೆಸೆಯಲ್ಲಿ ಪೋಷಕರ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದು ಕೊಳ್ಳಬೇಕು. ಮೊಬೈಲ್‌ಗೆ ಅಂಟಿಕೊಂಡರೆ ಹೃದಯ ವೈಶಾಲ್ಯತೆ ದೂರವಾಗುತ್ತದೆ. ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬೇಕು. ಒಳ್ಳೆಯ ಮಾರ್ಗದಲ್ಲಿ ಸಾಗಿ, ಮನೆಯವರೊಂದಿಗೆ ಮನಬಿಚ್ಚಿ ಮಾತನಾಡಿ. ಬದುಕನ್ನು ಅರ್ಥ ಮಾಡಿಕೊಳ್ಳಿ, ಉತ್ತಮ ಕೌಟುಂಬಿಕ ವಾತಾವರಣ ನಿರ್ಮಾಣಕ್ಕೆ ನೆರವಾಗಬೇಕು ಎಂದು ಹೇಳಿದರು.
ನುಗ್ಗೇಹಳ್ಳಿ ದರ್ಶಿನಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್.ಲೋಕೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅಂತರ್ಗತವಾಗಿರುತ್ತದೆ. ಲಭಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಛಾಪು ಮೂಡಿಸಬಹುದು. ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ನಮ್ಮ ಆಯಸ್ಸು ಮುಗಿದರೂ ಅಭ್ಯಾಸ ಮಾಡುವಷ್ಟು ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಬದುಕು, ವ್ಯಕ್ತಿತ್ವವನ್ನು ಬದಲಾಯಿಸುವ ಶಕ್ತಿ ಸಾಹಿತ್ಯಕ್ಕಿದೆ. ಇದು ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಡಿಜಿಟಲ್ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಗ್ರಂಥಗಳು ಅಮೂಲ್ಯವಾಗಿದ್ದು, ಪುಸ್ತಕಗಳನ್ನು ಪ್ರೀತಿಸುವವರಿಗೆ ಸ್ನೇಹಿತರ ಅವಶ್ಯಕತೆಯಿಲ್ಲ. ಇದರಿಂದ ನಮ್ಮ ಹೃದಯಕ್ಕೆ ಸಂಸ್ಕಾರ ಸಿಗುತ್ತದೆ. ಮಾನವೀಯತೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಸ್.ಆದಿಶೇಷಕುಮಾರ್ ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎ.ಎಲ್.ನಾಗೇಶ್, ಖಜಾಂಚಿ ಎ.ಎಂ.ಜಯರಾಂ, ತೀರ್ಪುಗಾರರಾದ ಇಂದಿರಾಶಾಸ್ತ್ರೀ, ನಾಗಶ್ರೀ ಇತರರು ಇದ್ದರು.
ಸಮಾಜದಲ್ಲಿ ಯಾವುದೇ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಬೇಕಾದರೆ ಆತ್ಮಸ್ಥೈರ್ಯ, ಎಲ್ಲರೊಂದಿಗೆ ಒಡನಾಟ ಮುಖ್ಯವಾದದ್ದು.
ಬಹುಮಾನ ವಿಜೇತರು: ಪಟ್ಟಣದ 10 ಶಾಲೆಗಳಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ರಾಧಾಕೃಷ್ಣ ವಿದ್ಯಾಶಾಲೆಯ ಕೆ.ವಿ.ಪ್ರದ್ಯುಮ್ನ (ಪ್ರಥಮ), ಟೈಮ್ಸ್ ಪದವಿ ಪೂರ್ವ ಕಾಲೇಜಿನ ಪುಣ್ಯನಿಧಿ ಮತ್ತು ಪೇಟೆ ಸರಕಾರಿ ಪ್ರೌಢಶಾಲೆಯ ಧನುಶ್ ಗೌಡ(ದ್ವಿತೀಯ), ಜ್ಞಾನಸಾಗರ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಸಾನ್ವಿ ಎಚ್.ಆರ್.ಗೌಡ ಮತ್ತು ಬಾಲಕಿಯರ ಸರಕಾರಿ ಪ್ರೌಢಶಾಲೆಯ ಸ್ಪಂದನಾ (ತೃತೀಯ) ಹಾಗೂ ಶಾಲಿನಿ ವಿದ್ಯಾಶಾಲೆಯ ತಬಸ್ಸುಂ ಸಮಾಧಾನಕರ ಬಹುಮಾನಗಳನ್ನು ಪಡೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಮಕ್ಕಳಿಗೆ ಹಾಗೂ ಬಹುಮಾನ ವಿಜೇತರಿಗೆ ಪುಸ್ತಕಗಳನ್ನೇ ಬಹುಮಾನಗಳನ್ನಾಗಿ ನೀಡಲಾಯಿತು.