

ಚನ್ನಪಟ್ಟಣ
ಗಣೇಶ ವಿಸರ್ಜನೆಗೆ ಕೆರೆಗೆ ಇಳಿದಿದ್ದ ವ್ಯಕ್ತಿಯೊರ್ವ ನೀರುಪಾಲಾಗಿರುವ ಘಟನೆ ತಾಲೂಕಿನ ಗರಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಾಪಣ್ಣ (46) ನೀರು ಪಾಲಾಗಿರುವ ವ್ಯಕ್ತಿ. ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ವಿಸರ್ಜನೆ ಅಂಗವಾಗಿ ಸಂಜೆ ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ಕೂಡ ನಡೆಸಲಾಗಿತ್ತು. ಮಧ್ಯರಾತ್ರಿ ವಿಸರ್ಜನೆ ವೇಳೆ ಈ ಅವಘಡ ಸಂಭವಿಸಿದೆ. ವಿಸರ್ಜನೆಗೆಂದು ಕೆರೆಗೆ ಇಳಿದಿದ್ದ ಈ ವ್ಯಕ್ತಿ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಸ್ಥಳೀಯರು ಕೂಡಲೇ ರಕ್ಷಣೆಗೆ ಮುಂದಾದರೂ ಸಹ ಪ್ರಯೋಜನವಾಗಿಲ್ಲ.
ಭಾನುವಾರ ಮುಂಜಾನೆಯಿಂದಲೇ ಮೃತದೇಹದ ಪತ್ತೆಗೆ ಅಕ್ಕೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಇವರುಗಳ ಜೊತೆಗೆ ಶವದ ಹುಡುಕಾಟದಲ್ಲಿ ಗ್ರಾಮದ ಜನರು ಸಹ ಜೊತೆಯಾಗಿದ್ದರು. ಆದರೆ, ಸಂಜೆವರೆಗೂ ಶವದ ಸಣ್ಣಸುಳಿವು ಸಹ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಭಾನುವಾರ ಸಂಜೆ ಮೃತದೇಹ ಪತ್ತೆಯಾಯಿತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಮೊದಲ ಬಲಿ!
ಗಣೇಶ ವಿಸರ್ಜನೆ ವೇಳೆ ತಾಲೂಕಿನಲ್ಲಿ ಮೊದಲ ಬಲಿ ಇದಾಗಿದೆ. ಗಣೇಶ ವಿಸರ್ಜನೆ ವೇಳೆ ಇಂತಹ ಅನಾಹುತಗಳನ್ನು ಎಲ್ಲೆಡೆ ಕಾಣಬಹುದು. ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಈಗಾಗಲೇ ಹಲವಾರು ಇಂತಹ ಪ್ರಕರಣಗಳು ನಡೆದಿವೆ. ಇಂತಹ ಪ್ರಕರಣಗಳು ಜರುಗದಂತೆ ಸಂಬಂಧಿಸದವರು ಕ್ರಮಕೈಗೊಳ್ಳಬೇಕಿದೆ.