ಅಪ್ರಾಪ್ತ ವಯಸ್ಸಿನ ಬಾಲಕಿಯನ್ನೂ ಬಿಡದ ಅರವತ್ತೈದು ವರ್ಷದ ಕಾಮುಕ; ಬಂಧಿತನ ವಿರುದ್ಧ ಬಿತ್ತು ಪೋಕ್ಸೋ ಕೇಸ್​

Untitled-1
Published on

ಉಡುಪಿ: ಆತನಿಗೆ 65 ವರ್ಷ. ಆದರೆ ಆತ ಈ ಇಳಿವಯಸ್ಸಲ್ಲೂ ಹನ್ನೊಂದು ವರ್ಷದ ಬಾಲಕಿ ಮೇಲೆರಗಿದ್ದಾನೆ. ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ ಕೊಟ್ಟ ಕಾಮುಕನನ್ನು ಪೊಲೀಸರು ಬಂಧಿಸಿದ್ದು, ಆತನ ಮೇಲೆ ಪೋಕ್ಸೋ ಕೇಸ್ ಜಡಿಯಲಾಗಿದೆ.

ಉಡುಪಿ ಜಿಲ್ಲೆಯ ಅನಂತ ಸೇರಿಗಾರ್ ಎಂಬಾತ ಬಂಧಿತ. ಈತ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಬಾಲಕಿಯು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾಳೆ. ಈ ಬಗ್ಗೆ ಮಕ್ಕಳ ಸಹಾಯವಾಣಿಯವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದು, ತಕ್ಷಣ ಅಪ್ರಾಪ್ತ ಬಾಲಕಿಯ ಮನೆಗೆ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಕಾರ್ಯಕರ್ತರಾದ ಯೋಗೀಶ್ ಮತ್ತು ಸುರಕ್ಷಾ ಭೇಟಿ ನೀಡಿ ಅಪ್ರಾಪ್ತ ಬಾಲಕಿಯನ್ನು ಸಮಾಲೋಚನೆಗೆ ಒಳಪಡಿಸಿದರು.

ಈ ಘಟನೆಯ ಬಗ್ಗೆ ಉಡುಪಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪೋಷಕರಿಗೆ ತಿಳಿಸಲಾಯಿತು. ಪೋಷಕರ ದೂರಿನಂತೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net