ಪರಿಶ್ರಮ, ತಾಳ್ಮೆ, ಶ್ರದ್ಧೆ ಯಶಸ್ಸಿಗೆ ದಾರಿ

FotoJet (3)
Published on

ಕನಕಪುರ  :ಪರಿಶ್ರಮ, ತಾಳ್ಮೆ, ಶ್ರದ್ಧೆ ಹಾಗೂ ಏಕಾಗ್ರತೆಯಿಂದ ಅಧ್ಯಯನ ಕೈಗೊಂಡರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯ ಉಪಕುಲಪತಿ ಶರಣಪ್ಪ.ವಿ.ಹಲಸೆ ತಿಳಿಸಿದರು.

ನಗರದ ರೂರಲ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯೆಯಿಂದ ಸಂಸ್ಕಾರವಂತರಾಗಲು ಸಾಧ್ಯ, ಕೊರಡಿನಂತೆ ಹೊಗೆಯಾಡುತ್ತಾ ನೂರಾರು ವರ್ಷ ಬಾಳುವುದಕ್ಕಿಂತ ಪ್ರಜ್ವಲಿಸುತ್ತಾ ಅಲ್ಪಕಾಲ ಬದುಕಿದರೂ ಅದು ಸಾರ್ಥಕ. ಎಷ್ಟು ವರ್ಷ ಬದುಕಿದ್ದೀರಿ ಎನ್ನುವುದು ಮುಖ್ಯವಲ್ಲ ಹೇಗೆ ಬದುಕಿದ್ದೀರಿ ಎನ್ನುವುದೇ ಮುಖ್ಯಎಂದರು.

ಹುಣಸೂರು ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಪ್ರಾಂಶುಪಾಲ ಎ.ರಾಮೇಗೌಡ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದಲ್ಲಷ್ಟೇ ಅಲ್ಲದೆ, ಸಹಪಠ್ಯ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಆರ್.ಇ.ಎಸ್ ಸಂಸ್ಥೆಯ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮಾತನಾಡಿ, ತಾಲೂಕಿನ ಗ್ರಾಮಾಂತರ ಪ್ರದೇಶದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.

ಕ್ರೀಡೆ, ಸಾಂಸ್ಕೃತಿಕ, ಶೈಕ್ಷಣಿಕ, ಹಲವಾರು ವಿಷಯಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಮಂಜುನಾಥ್, ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ, ಉಪಪ್ರಾಂಶುಪಾಲ ದೇವರಾಜು, ಪ್ರೊ.ತಮ್ಮಣ್ಣಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net