ಪೆರ್ನಾಜೆ ಶಾಲೆ ಮುಚ್ಚುವ ಸ್ಥಿತಿ

Ism_School
Published on

ಶಶಿ ಕುತ್ಯಾಳ ಈಶ್ವರಮಂಗಲ:

ಮುಂಭಾಗದಲ್ಲಿ ಎರಡೂವರೆ ಮೀಟರ್‌ನಷ್ಟು ಅಂತರದಲ್ಲಿ ದರೆ ಕುಸಿದಿದೆ. ಹಿಂಭಾಗದಲ್ಲಿ ಎತ್ತರದ ಗುಡ್ಡವಿದೆ. ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಪಾಯಕಾರಿ ಎಂಬ ಕಾರಣಕ್ಕಾಗಿ ಮಕ್ಕಳನ್ನು ಸಮೀಪದಲ್ಲಿರುವ ಖಾಸಗಿ ಶಾಲೆಗೆ ಸ್ಥಳಾಂತರ ಮಾಡಲಾಗಿದೆ. ಒಂದನೇ ಮತ್ತು ಎರಡನೇ ತರಗತಿಯಲ್ಲಿ ಮಕ್ಕಳೇ ಇಲ್ಲ. ಕಾಯಂ ಶಿಕ್ಷಕರೂ ಇಲ್ಲ. ಇದು ಪೆರ್ನಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೋಚನೀಯ ಕಥೆ.

ಪೆರ್ನಾಜೆ ಸೀತಾರಾಘವ ನಗರದಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗುಡ್ಡ ಪ್ರದೇಶದಲ್ಲಿ ಶಾಲಾ ಕಟ್ಟಡವಿದೆ. ಕೆಳಭಾಗದ ತಗ್ಗು ಪ್ರದೇಶದ ದರೆ ಕಳೆದ ವರ್ಷ ಕುಸಿದು ಅಪಾಯಕಾರಿ ಸನ್ನಿವೇಶ ನಿರ್ಮಾಣಗೊಂಡಿತ್ತು. ಹಿಂಬದಿಯಲ್ಲಿರುವ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಈ ವರ್ಷ ಮಕ್ಕಳನ್ನು ಸಮೀಪದಲ್ಲಿರುವ ಪೆರ್ನಾಜೆ ಸೀತಾರಾಘವ ಅನುದಾನಿತ ವಿದ್ಯಾಸಂಸ್ಥೆ ಎರಡು ಕೊಠಡಿಗಳಿಗೆ ಸ್ಥಳಾಂತರಿಸಲಾಗಿದೆ.

ಪೆರ್ನಾಜೆ ಭಾಗವು ಹೆಚ್ಚಿನ ಜನವಸತಿ ಇರುವ ಪ್ರದೇಶ ಅಲ್ಲ. ಇಂತಹ ಪ್ರದೇಶದಲ್ಲಿ ಶಾಲಾ ಕಟ್ಟಡ ನಿರ್ಮಿಸಿರುವುದರಿಂದ ಈ ಸ್ಥಿತಿ ಬಂದೊದಗಿದೆ. ಜತೆಗೆ ಮಕ್ಕಳ ಸಂಖ್ಯೆ ಕ್ಷೀಣಿಸತೊಡಗಿರುವುದರಿಂದ ಕೇವಲ 15 ವರ್ಷದಲ್ಲಿ ಈ ಶಾಲೆ ಮುಚ್ಚುವ ಹಂತಕ್ಕೆ ತಲುಪಿರುವುದು ಶಿಕ್ಷಣ ಇಲಾಖೆ ವ್ಯವಸ್ಥೆಯ ಲೋಪಕ್ಕೊಂದು ಸಾಕ್ಷಿ.

ಶಾಲಾ ಕಟ್ಟಡದ ವ್ಯವಸ್ಥೆಗಳೇನೋ ಚೆನ್ನಾಗಿವೆ. ಕಟ್ಟಡವೂ ಸುಂದರವಾಗಿದೆ. ಆದರೆ ಅಪಾಯಕಾರ ಸ್ಥಿತಿ ನಿರ್ಮಾಣವಾಗಿರುವುದರಿಂದ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿ ಶಾಲೆ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಯಾರಿಗೂ ಮಕ್ಕಳನ್ನು ಸಮೀಪದ ಅನುದಾನಿತ ಶಾಲೆಯ ಕೊಠಡಿಗೆ ಸ್ಥಳಾಂತರಿಸುವ ವಿಚಾರ ತಿಳಿಸಿರಲಿಲ್ಲ. ಅಪಾಯದ ಹಿನ್ನಲೆಯಲ್ಲಿ 6 ತಿಂಗಳ ಮಟ್ಟಿಗೆ ಮಾತ್ರ ಸ್ಥಳಾಂತರ ಮಾಡಿದ್ದೆಂಬ ವಿಚಾರ ಸ್ಥಳಾಂತರಿಸಿದ ಬಳಿಕವಷ್ಟೆ ತಿಳಿದಿದೆ. ಇಲ್ಲಿ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿರುವಾಗ ಯಾರು ತಾನೇ ಮಕ್ಕಳನ್ನು ಇಲ್ಲಿಗೆ ಕಳಿಸುತ್ತಾರೆ ಎನ್ನುವುದು ಈ ಭಾಗದ ಜನತೆಯ ಪ್ರಶ್ನೆ.

2 ಕ್ಲಾಸ್‌ಗಳಲ್ಲಿ ಮಕ್ಕಳೇ ಇಲ್ಲ

ಈ ವರ್ಷ ಒಂದನೇ ಮತ್ತು ಎರಡನೇ ತರಗತಿಯಲ್ಲಿ ಮಕ್ಕಳೇ ಇಲ್ಲ. ಮೂರನೇ ತರಗತಿಯಲ್ಲಿ 2, ನಾಲ್ಕನೇ ತರಗತಿಯಲ್ಲಿ 1, ಐದನೇ ತರಗತಿಯಲ್ಲಿ 1, ಆರನೇ ತರಗತಿಯಲ್ಲಿ 5, 7ನೇ ತರಗತಿಯಲ್ಲಿ 2 ಸೇರಿದಂತೆ ಇರುವುದು ಬರೀ 11 ಮಕ್ಕಳು ಮಾತ್ರ. ಕಾಯಂ ಶಿಕ್ಷಕರು ಇಲ್ಲ. ಕೆದಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶಾರದಾ ನಿಯೋಜನೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ಅತಿಥಿ ಶಿಕ್ಷಕಿಯರು ಇದ್ದಾರೆ.

ವ್ಯವಸ್ಥೆಗಳಿದ್ದರೂ ವ್ಯರ್ಥ

ಇದು ತಾರಸಿ ಕಟ್ಟಡವಾಗಿದ್ದು, 3 ತರಗತಿ ಕೊಠಡಿ, ಕಚೇರಿ ಕೊಠಡಿ ಸೇರಿ ಒಟ್ಟು 4 ಕೊಠಡಿಗಳಿವೆ. ಅಕ್ಷರ ದಾಸೋಹ ಕೊಠಡಿ, ವಿಶೇಷ ಮಕ್ಕಳ ಶೌಚಗೃಹ, ನಲ್ಲಿ ನೀರಿನ ವ್ಯವಸ್ಥೆ, ಶಾಲಾ ಪಕ್ಕದಲ್ಲಿ ಬಾಲಕರಿಗೆ, ಬಾಲಕಿಯರಿಗೆ ಪ್ರತ್ಯೇಕವಾದ ಶೌಚಗೃಹ ಇದೆ. ಮಳೆಗಾಲದಲ್ಲಿ ಸೋರುತ್ತಿದ್ದ ಹಿನ್ನಲೆಯಲ್ಲಿ ದುರಸ್ತಿಗಾಗಿ 2020-21ನೇ ಸಾಲಿನ ಮಳೆಹಾನಿ ಯೋಜನೆಯಡಿ ಮಂಜೂರಾದ ರೂ.2 ಲಕ್ಷ ಅನುದಾನದಲ್ಲಿ ಕಟ್ಟಡದ ಮೂರನೇ ಒಂದರಷ್ಟು ಭಾಗಕ್ಕೆ ತಗಡು ಶೀಟ್ ಅಳವಡಿಸಿ ಮೇಲ್ಛಾವಣಿ ನಿರ್ಮಿಸಲಾಗಿದೆ. ಅದಲ್ಲದೆ ಪ್ರತ್ಯೇಕವಾಗಿ ಅಕ್ಷರ ದಾಸೋಹ ಕೊಠಡಿ ಭಾಗಕ್ಕೆ ಸಿಮೆಂಟ್ ಶೀಟ್ ಅಳವಡಿಸಲಾಗಿದೆ.

ಈ ಹಿಂದೊಮ್ಮೆ ಖಾಸಗಿ ಶಾಲೆಯಾಗಿದ್ದುದು ದ.ಕ.ಜಿ.ಪಂ ಸರ್ಕಾರಿ ಶಾಲೆಯಾಗಿ ಪರಿವರ್ತನೆಗೊಂಡಿತ್ತು. ಆ ನಂತರ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕುಂಠಿತಗೊಳ್ಳುತ್ತಾ ಬಂದಿದೆ. ಈಗ ಅತ್ಯಂತ ಕಡಿಮೆ ಸಂಖ್ಯೆ ಮಕ್ಕಳಿದ್ದು ಶಾಲೆ ಮುಂದಿನ ಪರಿಸ್ಥಿತಿ ಅಯೋಮಯವಾಗಿದೆ. ಕುಮಾರ್ ಪೆರ್ನಾಜೆ, ಪ್ರಗತಿಪರ ಕೃಷಿಕರು.

ಕುಮಾರ್ ಪೆರ್ನಾಜೆ, ಪ್ರಗತಿಪರ ಕೃಷಿಕರು.

ತಿಂಗಳ ಹಿಂದೆ ಶಾಲೆಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಅಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಮಕ್ಕಳನ್ನು ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಿಸಲಾಗಿದೆ. ಶಾಲೆ ಎದುರು ಮಣ್ಣು ಕುಸಿದ ಕೆಳಗಡೆ ಭಾಗದಲ್ಲಿ ತಡೆಗೋಡೆ ನಿರ್ಮಿಸಲು ಎಸ್ಟಿಮೇಟ್ ಮಾಡಿ ಡಿಡಿಪಿಐ ಅವರಿಗೆ ಕಳುಹಿಸಿಕೊಡಲಾಗಿದೆ. ಲೋಕೇಶ್ ಎಸ್.ಆರ್, ಕ್ಷೇತ್ರ ಶಿಕ್ಷಣಾಧಿಕಾರಿ.

ಲೋಕೇಶ್ ಎಸ್.ಆರ್, ಕ್ಷೇತ್ರ ಶಿಕ್ಷಣಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net