

ಬೆಳ್ತಂಗಡಿ: ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಛತೆ ಕುರಿತು ಅರಿವು, ಜಾಗೃತಿ ಮೂಡಿಸುವ ಸಲುವಾಗಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ ಅವರ ಚಿಂತನೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಜನ ಸಹಭಾಗಿತ್ವದಲ್ಲಿ ಶ್ರದ್ಧಾಕೇಂದ್ರಗಳ ಬೃಹತ್ ಸ್ವಚ್ಛತಾ ಅಭಿಯಾನ ರಾಜ್ಯಾದ್ಯಂತ ಕೈಗೊಳ್ಳಲಾಗುತ್ತಿದೆ.
ಅಭಿಯಾನದಲ್ಲಿ ಜನರು ಸ್ವಯಂಸೇವಕರಾಗಿ ಪಾಲ್ಗೊಂಡು ವರ್ಷದಲ್ಲಿ 2 ಬಾರಿ ಅಂದರೆ ಸ್ವಾತಂತ್ರೊೃೀತ್ಸವ, ಮಕರ ಸಂಕ್ರಾತಿ ಸಂದರ್ಭ ದೇವಸ್ಥಾನ, ಬಸದಿ, ಮಸೀದಿ, ಚರ್ಚ್‌ಗಳ ಸ್ವಚ್ಛತೆ ಕೈಗೊಳ್ಳುವ ಮೂಲಕ ಸ್ವಚ್ಛತಾ ಸಂದೇಶವನ್ನು ಸಾರುತ್ತಾರೆ. ಆಗಸ್ಟ್ 8ರಿಂದ 14ರವರೆಗೆ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಸಪ್ತಾಹ ನಡೆಸಲಾಗುವುದು. ರಾಜ್ಯಾದ್ಯಂತ 16,797 ಶ್ರದ್ಧಾಕೇಂದ್ರಗಳನ್ನು ಗುರುತಿಸಲಾಗಿದ್ದು, 3,95,724 ಸ್ವಯಂಸೇವಕರು, ದೇವಾಲಯದ ಆಡಳಿತ ಮಂಡಳಿ, ಒಕ್ಕೂಟ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣೆ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಊರಿನ ಗಣ್ಯರು, ಗ್ರಾಪಂ ಸದಸ್ಯರು, ವಿವಿಧ ಸಂಘ ಸಂಸ್ಥೆ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಿದ್ದಾರೆ.
ದೇವಸ್ಥಾನದ ಸುತ್ತಮುತ್ತಲಿನ ಗಿಡಗಂಟಿಗಳನ್ನು ಕತ್ತರಿಸಿ ಸ್ವಚ್ಛಗೊಳಿಸುವುದು. ಮಂದಿರ, ಮಸೀದಿ, ಚರ್ಚ್‌ಗಳ ಆವರಣ ಸ್ವಚ್ಛತೆ, ಒಳಾಂಗಣ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ದೇವಸ್ಥಾನದ ಕಲ್ಯಾಣಿ, ಸಭಾಭವನ, ಅಶ್ವಥ ಕಟ್ಟೆ/ಅರಳಿಕಟ್ಟೆ ಸ್ವಚ್ಛಗೊಳಿಸುವುದು. ಶ್ರದ್ಧಾ ಕೇಂದ್ರದ ಪರಿಕರಗಳನ್ನು ಸ್ವಚ್ಛಗೊಳಿಸುವುದು. ಸಾರ್ವಜನಿಕ ಶೌಚಗೃಹ, ನಗರ ಸ್ವಚ್ಛತೆ, ಬೀದಿ ಸ್ವಚ್ಛತೆಗೆ ಒತ್ತು ನೀಡಲಾಗುವುದು. ಶ್ರದ್ಧಾಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಬಟ್ಟೆ ಚೀಲ ಬಳಕೆ ಮಾಡುವುದು, ಜಾತ್ರೆ, ವಿಶೇಷ ಕಾರ್ಯಕ್ರಮದ ದಿನ ಸ್ವಚ್ಛತೆಗೆ ತಂಡ ರಚಿಸಿ ಜಾಗೃತಿ ಮೂಡಿಸುವುದು, ಸ್ವಚ್ಛತೆ ಬಗ್ಗೆ ನಿಗಾ ವಹಿಸುವ ಆಸಕ್ತ ಸ್ವಯಂಸೇವಕರ ಕಾವಲು ಸಮಿತಿ ರಚನೆ ಮಾಡುವುದು, ತ್ಯಾಜ್ಯಗಳನ್ನು ಬಿಸಾಡಲು ಡಸ್ಟ್‌ಬಿನ್ ಇಟ್ಟು ಕಸ ಹಾಕುವಂತೆ ಭಕ್ತಾದಿಗಳಿಗೆ ಸೂಚನೆ ನೀಡುವ ಫಲಕಗಳನ್ನು ಹಾಕುವುದು, ಧಾರ್ಮಿಕ ಕೇಂದ್ರಗಳ ಪಾವಿತ್ರೃಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗುವುದು.