

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
30 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಜೀಣೋದ್ಧಾರಗೊಳ್ಳುತ್ತಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವ ಸಲುವಾಗಿ ಶಿಲಾಸೇವೆ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರವೀಂದ್ರನಾಥ ಜಿ.ಹೆಗ್ಡೆ ಹೇಳಿದರು.
ಈ ಸಂಬಂಧ ದೇವಳದಲ್ಲಿ ಭಾನುವಾರ ನಡೆದ ಸಮಿತಿ ಸಭೆ, ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಕ್ತರು ಏಕ ಶಿಲೆಯಿಂದ ಆರಂಭಿಸಿ ಸಹಸ್ರ ಶಿಲಾಸೇವೆಯವರೆಗೂ ಸೇವೆ ನೀಡಬಹುದಾಗಿದೆ. ಶಿಲಾಸೇವೆಯೊಂದಕ್ಕೆ 1,111 ರೂ., ಎರಡು ಶಿಲೆಗಳಿಗೆ 2,211 ರೂ., ಐದು ಶಿಲೆಗಳಿಗೆ 5,511 ರೂ., ಹತ್ತು ಶಿಲೆಗಳಿಗೆ 11,111 ರೂ., ನೂರು ಶಿಲೆಗಳಿಗೆ 1,11,111ರೂ., ಸಾವಿರ ಶಿಲೆಗಳಿಗೆ 11,11,111 ರೂಪಾಯಿ ನಿಗದಿಪಡಿಸಲಾಗಿದೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ ಮಾತನಾಡಿ, ಏಕಾದಶ ರುದ್ರರಿರುವ ಕಾರಣ 11 ಸಂಖ್ಯೆಗೆ ಮಹತ್ವ ನೀಡಲಾಗಿದ್ದು, ಭಗವಂತನ ಆಲಯ ನಿರ್ಮಾಣದಲ್ಲಿ ತನು, ಮನ, ಧನಗಳಿಂದ ಸಹಕರಿಸಿ ದೇವಾಲಯದ ಪುರ್ನವೀಕರಣದ ಮಹಾಯಜ್ಞದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ದೇವಳ ಆನುವಂಶಿಕ ಮೊಕ್ತೇಸರ ಪಿ.ಭವಾನಿಶಂಕರ ಹೆಗ್ಡೆ ಮಾತನಾಡಿ, ಜೀರ್ಣೋದ್ಧಾರ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳು ಭರದಿಂದ ಸಾಗುತ್ತಿದೆ. ಮುಂಬೈ, ಬೆಂಗಳೂರು, ಚೆನ್ನೈನಲ್ಲಿರುವ ದೇವಳದ ಭಕ್ತರನ್ನು ಸೇರಿಸಿಕೊಂಡು ಜೀರ್ಣೋದ್ಧಾರ ಸಮಿತಿ ರಚಿಸಲು ಶೀಘ್ರದಲ್ಲಿ ಅಲ್ಲಿಗೆ ತೆರಳಲಾಗುವುದು ಎಂದರು.
ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ವೈ ಶಿಲಾಸೇವೆ ನಿವೇದನೆ ಪತ್ರ ಬಿಡುಗಡೆಗೊಳಿಸಿದರು. ಗ್ರಾಮದ ಪ್ರತೀ ಮನೆಗೂ ಜೀರ್ಣೋದ್ಧಾರ, ಶಿಲಾಸೇವೆಯ ಮಾಹಿತಿ ನೀಡುವ ಸಲುವಾಗಿ ಗ್ರಾಪಂ ಸದಸ್ಯರನ್ನೊಳಗೊಂಡು ಸಮಿತಿಯೊಂದಿಗೆ ಮನೆ ಭೇಟಿ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ ಹೆಗ್ಡೆ, ಅರ್ಚಕ ವೈ.ಗುರುರಾಜ ಭಟ್, ಸಮಿತಿ ಪ್ರಮುಖರಾದ ವೈ.ಸುಕುಮಾರ್, ನವೀನಚಂದ್ರ ಜೆ.ಶೆಟ್ಟಿ, ಪಿ.ಕೆ.ಸದಾನಂದ, ಭಾಸ್ಕರ ಪಡುಬಿದ್ರಿ, ಪ್ರಕಾಶ್ ದೇವಾಡಿಗ ಉಪಸ್ಥಿತರಿದ್ದರು. ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.