

ನರೇಂದ್ರ ಎಸ್.ಮರಸಣಿಗೆ ಹೆಬ್ರಿ ತಾಲೂಕು ಮಡಾಮಕ್ಕಿಗೆ ಕುಚ್ಚೂರು- ಮಾಂಡಿ ಮೂರ್ಕೈ ಮೂಲಕ ಸಂಚರಿಸುವ ಕಂಚರಕಾಳು ಸೇತುವೆ ದುರಸ್ತಿ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಂಡಿದೆ. ಇವಾಗ ಮಡಾಮಕ್ಕಿ ಪರಿಸರದ ಜನರಿಗೆ ಹತ್ತಿರದಿಂದ ಸಂಚರಿಸಲು ಇರುವ ಹತ್ತಿರದ ದಾರಿ ಹುತ್ರುಬೈಲ್- ಜೆಡ್ಡಿನ ರಸ್ತೆ ತೀವ್ರ ಹದಗೆಟ್ಟು ಸಂಚರಿಸಲು ಯೋಗ್ಯವಾಗಿಲ್ಲ. ಮಡಾಮಕ್ಕಿಯ ಜನರಿಗೆ ಸದ್ಯಕ್ಕೆ ಹತ್ತಿರದ ದಾರಿ ಇದಾಗಿದೆ. ಸೋಮೇಶ್ವರದ ಮೂಲಕ 18, ಆರ್ಡಿ ಬೇಳಂಜೆ ಮೇಲೆ 14 ಕಿ.ಮೀ. ಆದರೆ ಹುತ್ರಬೈಲು ಜಡ್ಡಿಯ ರಸ್ತೆ ಮೂಲಕ ಕೇವಲ 8 ಕಿ.ಮೀ. ಹೆಬ್ರಿಗೆ ಹೋಗಲು ಇರುವ ದೂರ. ಸದ್ಯಕ್ಕೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಬಹುತೇಕರು ಈ ರಸ್ತೆ ಮೂಲಕ ಸಂಚಾರ ಮಾಡುತ್ತಿದ್ದಾರೆ. ಅಲ್ಲಲ್ಲಿ ಬೃಹತ್ ಗಾತ್ರದ ಗುಂಡಿಗಳ ನಿರ್ಮಾಣ ಆಗಿದೆ. ಕೆಸರು ರಾಡಿಯಿಂದ ವಾಹನಗಳು ಸ್ಕಿಡ್ ಆಗುವ ಸಂಭವ ಹೆಚ್ಚಾಗಿದೆ. ಸಂಬಂಧಪಟ್ಟವರು ತಾತ್ಕಾಲಿಕವಾಗಿ ದುರಸ್ತಿ ಮಾಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಂಚರ ಕಾಳು ಸೇತುವೆ ಬಳಿ ಇರುವ ತಾತ್ಕಾಲಿಕ ರಸ್ತೆಯನ್ನು ಒಂದು ವಾರದ ಹಿಂದೆ ಜನರು ಪ್ರತಿಭಟನೆ ನಡೆಸಿದಾಗ ಎರಡು ದಿನದಲ್ಲಿ ದುರಸ್ತಿ ಮಾಡಿಕೊಡುತ್ತೇವೆ ಎಂದು ವಾಗ್ದಾನ ನೀಡಿದ ಅಧಿಕಾರಿಗಳು ಒಂದು ವಾರ ಕಳೆದರೂ ಅದರ ಗೋಜಿಗೆ ಹೋಗಲಿಲ್ಲ. ಈ ರಸ್ತೆ ಇಲ್ಲದಿರುವುದರಿಂದ ಸಾವಿರಾರು ಜನರಿಗೆ ತೊಂದರೆಯಾಗುತ್ತಿದೆ. ಬೆಳಗ್ಗಿನಿಂದ ಸಂಜೆ ತನಕ ತಾತ್ಕಾಲಿಕ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. *ಸ್ಕಿಡ್ ಆಗುವ ಆತಂಕ: ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಪಕ್ಕದಲ್ಲಿ ಚರಂಡಿ ಇರುವುದರಿಂದ ಭಾರಿ ಮಳೆಗೆ ಅಲ್ಲಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರಿಂದ ಬೈಕ್ ಸವಾರರು ಜೀವ ಭಯದಿಂದ ಸಂಚಾರ ಮಾಡುತ್ತಿದ್ದಾರೆ. ಕಿಂಚಿತ್ತು ಎಡವಿದರು ಸ್ಕಿಡ್ ಆಗುವ ಲಕ್ಷಣ ಹೆಚ್ಚಾಗಿದೆ. ಬೈಕ್‌ನಲ್ಲಿ ಹೆಚ್ಚಾಗಿ ಶಾಲಾ ಮಕ್ಕಳನ್ನು ಹೆತ್ತವರು ಕೂರಿಸಿಕೊಂಡು ಹೋಗುತ್ತಿರುವಾಗ ಘಟನೆ ನಡೆಯುತ್ತಿವೆ.
ಕಾಡಿನ ಮಧ್ಯದಲ್ಲಿ ಸಂಚರಿಸುವ ರಸ್ತೆ ಮಾರ್ಗ ಕಿರಿದಾಗಿದ್ದು, ಅತಿಯಾದ ಮಳೆಯಿಂದ ಕೆಸರುಮಯವಾಗಿದೆ. ದ್ವಿಚಕ್ರ, ತ್ರಿಚಕ್ರ ವಾಹನ ಚಾಲನೆ ಮಾಡುವಾಗ ಅಪಘಾತವಾದ ಘಟನೆ ನಡೆದಿದೆ. ಹೆಬ್ರಿಗೆ ಶಾಲಾ-ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವ ಮಹಿಳೆಯರಿಗೆ ತುಂಬಾ ಕಷ್ಟವಾಗಿದೆ. ನೀರಿನ ಪೈಪ್‌ಲೈನ್ ಮಾಡಿ ಹುತ್ರುಬೈಲು ಸಮೀಪ ಆಳವಾದ ಹೊಂಡವಾಗಿ ಅಲ್ಲಲ್ಲಿ ರಸ್ತೆಗಳು ಸಿಂಕಾಗಿ ವಾಹನಗಳು ಹೂತು ಬೀಳುತ್ತವೆ. ಸದ್ಯಕ್ಕಿರುವ ರಸ್ತೆಯನ್ನು ಶೀಘ್ರದಲ್ಲಿ ದುರಸ್ತಿಗೊಳಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹೆಬ್ರಿಗೆ ಹೋಗಲು ಹುತ್ರುಬೈಲ್ ರಸ್ತೆ ನಮಗೆ ಸಮೀಪವಾದದು. ಇಲ್ಲದಿದ್ದಲ್ಲಿ ಸುತ್ತು ಬಳಸಿ ಹೆಬ್ರಿಗೆ ಹೋಗಬೇಕು. ಸದ್ಯಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಬಹುತೇಕ ಹೆತ್ತವರು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಕಂಚರ ಕಾಳು ಸೇತುವೆ ಬಳಿ ಎರಡು ದಿನದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳಿದ ಅಧಿಕಾರಿಗಳು ವಾರ ಕಳೆದರೂ ಸುದ್ದಿ ಇಲ್ಲ. ದಯಮಾಡಿ ಹುತ್ರುಬೈಲ್ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಡಬೇಕು. ಪೈಪ್‌ಲೈನ್ ಕಾಮಗಾರಿ ಆವಾಂತರದಿಂದ ಅನೇಕ ಸಮಸ್ಯೆ ಇದೆ. ಬಾಲಕೃಷ್ಣ ಶೆಟ್ಟಿ, ಮಡಾಮಕ್ಕಿ ರಸ್ತೆಯ ತಾತ್ಕಾಲಿಯ ದುರಸ್ತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು. ನೀರಿನ ಪೈಪ್‌ಲೈನ್ ಕಾಮಗಾರಿಯಿಂದ ಸಮಸ್ಯೆ ಇದ್ದರೆ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುತ್ತೇವೆ. ವಿಜಯ, ಇಒ, ಹೆಬ್ರಿ ತಾಪಂ https://www.vijayavani.net/district-magistrate-swaroopa-t-k-visits-amrutheshwari-temple https://www.vijayavani.net/a-day-in-the-mud-from-team-trasi