

ಹೂವಿನಹಡಗಲಿ: ಅಜ್ಞಾನ ಕಳೆದು ಸುಜ್ಞಾನದ ಬೆಳಕು ಚೆಲ್ಲುವ ಶಕ್ತಿ ಶಿವಾನುಭವಕ್ಕಿದೆ ಎಂದು ಹಾವೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಪುಷ್ಪವತಿ ಶಲವಡಿಮಠ ಹೇಳಿದರು. ತಾಲೂಕಿನ ಹೊಳಲು ಗ್ರಾಮದ ಶ್ರೀಮಲ್ಲಿಕಾರ್ಜುನ ವಿರಕ್ತ ಮಠದಲ್ಲಿ ಬುಧವಾರ ಆಯೋಜಿಸಿದ್ದ 5ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧುನಿಕತೆಯ ಭರಾಟೆಯಲ್ಲಿ ಶರಣ ಸಂಸ್ಕೃತಿಗಳು, ಧಾರ್ಮಿಕ ನಂಬಿಕೆ ಹಾಗೂ ಭಕ್ತಿ, ಭಾವಗಳು ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಸಮಾಜವನ್ನು ತಿದ್ದುವುದು ಸಾಮಾನ್ಯ ಮಾತಲ್ಲ. ಹೀಗಿರುವಾಗ ಶ್ರೀಗಳು ಸದಾ ಸಮಾಜ ಸೇವೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಈ ಭಾಗದ ಜನಮನದಲ್ಲಿ ಆಧ್ಯಾತ್ಮದ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.
ಭಕ್ತಿಯ ತವರೂರು ಹಾಗೂ ಧಾರ್ಮಿಕತೆಯ ನೆಲೆಬೀಡು ಎನಿಸಿರುವ ಹೊಳಲು ಗ್ರಾಮದಲ್ಲಿ ಲಿಂಗನಾಯಕನಹಳ್ಳಿಯ ಶ್ರೀಚನ್ನವೀರ ಶ್ರೀಗಳು ಹಾಗೂ ಇಲ್ಲಿನ ಶ್ರೀಚನ್ನಬಸವ ಶ್ರೀಗಳು ಪುರಾಣ, ಪ್ರವಚನ ಹಾಗೂ ಶಿವಾನುಭವ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿನ ಭಕ್ತಿಯನ್ನು ಇಮ್ಮಡಿಗೊಳಿಸುತ್ತಿದ್ದಾರೆ ಎಂದರು.
ಶ್ರೀಮಲ್ಲಿಕಾರ್ಜುನ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಸುಖ ಸಂಸಾರಕ್ಕೆ ತಾಳ್ಮೆಯೊಂದೆ ಸೂತ್ರ ಆದ್ದರಿಂದ ಜೀವನದಲ್ಲಿ ಸಹನೆ ಇರಲಿ ಎಂದರು. ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ಹಲಗೇರಿ, ಉಪಾಧ್ಯಕ್ಷೆ ದ್ರಾಕ್ಷಾಯಣಿ ಕಲ್ಮಠ ಇತರರಿದ್ದರು.