ಸ್ಥಳೀಯ ಸಂಸ್ಥೆಗಳಲ್ಲಿಲ್ಲ ಪುರ ಪಿತೃಗಳು

11_12_rama_Flag (cmc) 1
Published on

*ಅವಧಿ ಮುಗಿದರೂ ಕಂಗಟ್ಟಾದ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ

* ಸಾರ್ವಜನಿಕರಿಗೆ ತಪ್ಪದ ತೊಂದರೆ

ಗಂಗಾಧರ್ ಬೈರಾಪಟ್ಟಣ ರಾಮನಗರ

ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಈಗ ಪುರ ಪಿತೃಗಳಿಲ್ಲದೆ ಖಾಲಿ ಖಾಲಿಯಾಗಿವೆ.

ಹೌದು. ಜಿಲ್ಲೆಯಲ್ಲಿರುವ ಪುರಸಭೆ ಮತ್ತು ನಗರಸಭೆಗಳಲ್ಲಿ ಕೆಲವು ಅವಧಿ ಮುಗಿದ ಕಾರಣ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ತೆರವಾಗಿದ್ದರೆ, ಮತ್ತೆ ಕೆಲವು ಮೀಸಲಾತಿ ಗೊಂದಲಕ್ಕೆ ಸಿಲುಕಿ ಅಧಿಕಾರ ಕಳೆದುಕೊಂಡಿವೆ.

ಎಲ್ಲೆಲ್ಲಿ ಇಲ್ಲ?: ಜಿಲ್ಲೆಯಲ್ಲಿ ಮಾಗಡಿ, ಬಿಡದಿಯ ಎರಡು ಪುರಸಭೆಗಳು ಮತ್ತು ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರ ನಗರಸಭೆಗಳು ಇವೆ. ಇವುಗಳಲ್ಲಿ ಯಾವುದಕ್ಕೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇಲ್ಲ. ಇದರಲ್ಲಿ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಯ ಮೊದಲ 30 ತಿಂಗಳ ಮೀಸಲಾತಿ ಅವಧಿ ಆಗದ ಕಾರಣ ಜನರಿಂದ ಆಯ್ಕೆಗೊಂಡಿದ್ದರೂ, ಕೌನ್ಸಿಲರ್‌ಗಳು ಅಧಿಕಾರ ಇಲ್ಲದೆ ಕೈ ಕಟ್ಟಿ ಕುಳಿತುಕೊಳ್ಳುವಂತೆ ಆಗಿದೆ.

ಮಾಗಡಿಯಲ್ಲಿ ಗೊಂದಲ:

ಮಾಗಡಿಯಲ್ಲಿ ಮೊದಲ 30 ತಿಂಗಳ ಅವಧಿ ಪೂರ್ಣಗೊಂಡ ನಂತರ ಎರಡನೇ ಅವಧಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಇದರ ವಿರುದ್ಧ ನ್ಯಾಯಾಲಯಕ್ಕೆ ಹೋದ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಅಧಿಕಾರ ಇಲ್ಲದಂತೆ ಆಗಿದೆ. ಇನ್ನು ಒಂದೂವರೆ ವರ್ಷ ಮಾತ್ರ ಅಧಿಕಾರಾವಧಿ ಉಳಿದಿದೆ. ಆದರೆ, ಕೌನ್ಸಿಲರ್‌ಗಳಿಗೆ ಯಾವುದೇ ಅಧಿಕಾರ ಚಲಾಯಿಸಲು ಆಗುತ್ತಿಲ್ಲ, ಜನರ ಕೆಲಸ ಮಾಡಿಸಲು ಸಾಧ್ಯವಾಗದೆ ಕೈ ಕಟ್ಟಿ ಕುಳಿತುಕೊಳ್ಳುವಂತೆ ಆಗಿದೆ.

ಜನರಗೋಳು ಕೇಳೋರಿಲ್ಲ

ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಲೋಕಸಭೆ ಚುನಾವಣೆ ಗುಂಗಿನಲ್ಲಿವೆ. ಜೂ.4ರ ನಂತರ ಎಲ್ಲವೂ ಟೇಕ್ ಆ್ ಆಗುವ ನಿರೀಕ್ಷೆ ಇದೆ. ಆದರೆ, ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಉಪಾಧ್ಯಕ್ಷರನ್ನು ನೇಮಕ ಮಾಡುವ ವಿಚಾರದಲ್ಲಿ ಗೊಂದಲ ಮುಂದುವರಿಯುವುದು ಖಾತ್ರಿ. ಇದು ಸಾರ್ವಜನಿಕರಿಗೆ ತೊಂದರೆ ತಂದೊಡ್ಡಿದೆ.

ನಗರ ಮತ್ತು ಪುರಸಭೆ ಸದಸ್ಯರಾಗಿ ಆಯ್ಕೆ ಆದ ನಂತರ ಆಯಾ ವಾರ್ಡ್‌ಗಳ ಸಮಸ್ಯೆ ಬಗೆ ಹರಿಸುವ ಜವಾಬ್ದಾರಿ ಸದಸ್ಯರ ಮೇಲೆಯೇ ಇರುತ್ತದೆ. ಆದರೆ, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಆಗದ ಹೊರತು ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟದ ಕೆಲಸ. ಸ್ಥಳೀಯ ಸಂಸ್ಥೆಗಳಲ್ಲಿ ಬೀಡು ಬಿಟ್ಟಿರುವ ಸಿಬ್ಬಂದಿ ಅಧಿಕಾರ ಇಲ್ಲದೆ ಸದಸ್ಯರ ಮಾತಿಗೆ ಕವಡೆ ಕಿಮ್ಮತ್ತು ನೀಡುವುದಿಲ್ಲ. ಕೆಲಸ ಆಗದಿದ್ದರೆ ಜನತೆ ಸುಮ್ಮನೆ ಬಿಡುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸದಸ್ಯರು ಇದ್ದಾರೆ.

ವರ್ಗಾವಣೆ ಮಾಡಿ

ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿಟ್ಟು ಇನ್ನುಳಿದ ಎಲ್ಲ ಸಿಬ್ಬಂದಿ ಕಳೆದ ಹಲವು ವರ್ಷಗಳಿಂದಲೇ ಒಂದೇ ಕಡೆ ಬೀಡುಬಿಟ್ಟಿದ್ದಾರೆ. ಇದರಿಂದ ಸಾರ್ವಜನಿಕರ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನುವುದು ಸ್ಥಳೀಯರ ಆಕ್ರೋಶ. ಹಲವು ವರ್ಷಗಳಿಂದ ಒಂದೇ ಕಡೆ ಬೀಡು ಬಿಟ್ಟಿರುವ ಸಿಬ್ಬಂದಿಯನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎನ್ನುತ್ತಾರೆ ಸಾರ್ವಜನಿಕರು.

ಸರ್ಕಾರ ಕ್ರಮವಹಿಸಬೇಕು

ಮೀಸಲಾತಿ ಗೊಂದಲ ಬಹುತೇಕ ಕೋರ್ಟ್ ಮೆಟ್ಟಿಲೇರಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ. ನಗರ ಸ್ಥಳೀಯ ಸಂಸ್ಥೆಗಳು ಸರ್ಕಾರಕ್ಕೆ ಆದಾಯ ತಂದುಕೊಡುವ ಮೂಲಗಳೇ ಆಗಿದ್ದು, ಇವುಗಳಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದೆ ಹೋದರೆ ಸಿಬ್ಬಂದಿಗೆ ಲಗಾಮು ಹಾಕಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಹಾಲಿ ಖಾಲಿ ಇರುವ ಮಾಗಡಿ, ಬಿಡದಿ, ಕನಕಪುರ ಜತೆಗೆ, ಈಗಷ್ಟೇ ಖಾಲಿ ಆಗಿರುವ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.

ಮೀಸಲಾತಿ ವಿರುದ್ಧವಾಗಿ ಕೋರ್ಟ್‌ನಲ್ಲಿ ಪ್ರಕರಣ ಇದೆ. ಇದರಿಂದ ವರ್ಷದಿಂದ ಅಧಿಕಾರ ಇಲ್ಲದಂತೆ ಆಗಿದೆ. ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸದಸ್ಯರ ಮಾತುಗಳಿಗೆ ಮನ್ನಣೆ ಕೊಡುವುದಿಲ್ಲ. ಬಲವಂತದಿಂದ ಅವರ ಬಳಿ ಕೆಲಸ ಮಾಡಿಸುವಂತೆ ಆಗಿದೆ. ಬಾಲು, ಮಾಗಡಿ ಪುರಸಭೆ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net