

ವಿಜಯವಾಣಿ ಸುದ್ದಿಜಾಲ ಅಂಪಾರು
ದಾಸರಮಕ್ಕಿ- ವಾಲ್ತೂರು ಸಂಪರ್ಕಿಸುವ ಸೇತುವೆ ಬಹುವರ್ಷದ ಬೇಡಿಕೆಯಾಗಿದೆ. ದಾನಿಗಳ ಸಹಕಾರದಿಂದ ಒಂದು ಸುಸಜ್ಜಿತವಾದ ಕಾಲುಸಂಕ ನಿರ್ಮಾಣದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಕೆಲಸಗಳಿಗೆ ಹೋಗುವವರಿಗೆ ಅನುಕೂಲವಾಗಿದೆ. ಎಲ್ಲವನ್ನೂ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಬದಲು, ತಮ್ಮ ಇಚ್ಛಾಶಕ್ತಿ ಬಳಸಿ ಕಾರ್ಯೋನ್ಮುಖರಾದರೆ ಹೇಗೆ ಜನರ ಸಮಸ್ಯೆಗಳನ್ನು ನಿವಾರಿಸಬಹುದು ಎನ್ನುವುದಕ್ಕೆ ಅರುಣಾಚಲಂ ಕಾಲುಸಂಕಗಳೇ ದಂತಕತೆಗಳಾಗಿ ಸಮಾಜದ ಮುಂದೆ ನಿಲ್ಲುತ್ತದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಸಮೃದ್ಧ ಬೈಂದೂರು ಮುಂದಾಳುತ್ವದಲ್ಲಿ ಇಂಡಸ್ ಟಿಎಂಟಿ ಇಂಡಸ್ಟ್ರೀಸ್ನ ಸಿಎಸ್ಆರ್ ನಿಧಿ ಮೂಲಕ ಸಮ್ಯತ ಫೌಂಡೇಶನ್ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಅಂಪಾರು ಗ್ರಾಮದ ದಾಸರಮಕ್ಕಿ- ವಾಲ್ತೂರು ಸಂಪರ್ಕಿಸುವ ಹೊಳೆಗೆ ಅರುಣಾಚಲಂ ಕಾಲುಸಂಕವನ್ನು ಇತ್ತೀಚಿಗೆ ಉದ್ಘಾಟಿಸಿ ಮಾತನಾಡಿದರು.
ದಾನಿಗಳಾದ ಇಂಡಸ್ ಟಿಎಂಟಿ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್ ಶ್ರೀಕಾಂತ್, ತಾಯಿ ಸುಜಾತಮ್ಮ, ಪತ್ನಿ ಪದ್ಮಪ್ರಿಯಾ, ಸಮ್ಯತ ಫೌಂಡೇಶನ್ ಸಂಸ್ಥಾಪಕ ಮುರಳಿ ಎಂ., ಕವ್ರಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಚ್.ಸತೀಶ್ ಶೆಟ್ಟಿ ಹಡಾಳಿ, ಅಂಪಾರು ಗ್ರಾ.ಪಂ. ಸದಸ್ಯರಾದ ಕಿರಣ್ ಹೆಗ್ಡೆ, ನವೀನ್ ಶೆಟ್ಟಿ, ಸುಭಾಶ್ ಶೆಟ್ಟಿ, ಭಾರತಿ ಶೇಟ್, ಅರುಣ್ ಶೆಟ್ಟಿ, ವಿಜಯ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.