

ಸೋಮವಾರಪೇಟೆ: ತಾಲೂಕಿನಾದ್ಯಂತ ಮಳೆಯ ಆರ್ಭಟ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಗ್ರಾಮೀಣ ಭಾಗದಲ್ಲಿ ಬಿರುಗಾಳಿ ಎಡಬಿಡದೆ ಮಳೆ ಸುರಿಯುತ್ತಿದ್ದು ಮರಗಳು ಧರೆಗುರುಳುತ್ತಿದ್ದು, ಹಾನಿ ಪ್ರಮಾಣ ಹೆಚ್ಚಾಗುತ್ತಿದೆ. ಕೃಷಿಕರು ಕೃಷಿಭೂಮಿಗೆ ತೆರಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ದನಕರುಗಳು ಕೊಟ್ಟಿಗೆಗಳಿಂದ ಹೊರ ಹೋಗಲು ಹಿಂಜರಿಯುತ್ತಿವೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಎರಡು ವಾರಗಳಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿರುವುದರಿಂದ ಭೂಮಿಯ ಮಣ್ಣು ಸಡಿಲವಾಗುತ್ತಿದ್ದು, ಮರಗಳು ಉರುಳುವುದಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಮರ ಬೀಳುವುದರಿಂದ ಕಾಫಿ ಗಿಡಗಳು ಮುರಿಯುತ್ತಿವೆ. ಕಾಫಿ ಕಾಯಿ ಕೂಡ ಉದುರಿ ನಷ್ಟವಾಗುತ್ತಿದೆ.
ಪುಷ್ಪಗಿರಿ ಬೆಟ್ಟ ತಪ್ಪಲಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಮರಬಿದ್ದು ಹಾಳಾದ ವಿದ್ಯುತ್ ಸಂಪರ್ಕವನ್ನು ಸರಿಪಡಿಸಲು ಬೆರಳಣಿಕೆಯ ಸೆಸ್ಕ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ವಿದ್ಯುತ್ ತಂತಿಗಳನ್ನು ಸರಿಪಡಿಸಿದ ಅರ್ಧ ಗಂಟೆಯೊಳಗೆ ಮತ್ತೊಂದು ಮರ ಬಿದ್ದು ತಂತಿಗಳು ತುಂಡಾಗುತ್ತಿವೆ ಎಂದು ಸೆಸ್ಕ್ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲೂ ವಿದ್ಯುತ್ ವ್ಯತ್ಯಯವಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಮಳೆಯ ನೀರನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಒದಗಿದೆ ಎಂದು ನಿವಾಸಿ ಡಿ.ಪಿ.ಲೋಕೇಶ್ ಹೇಳಿದರು.
ಸೋಮವಾರಪೇಟೆ, ಶಾಂತಳ್ಳಿ, ಸಕಲೇಶಪುರ ರಾಜ್ಯಹೆದ್ದಾರಿಯ ಯಡೂರು ಗ್ರಾಮದ ಸಮೀಪ ಜೇಡಿಗುಂಡಿ ಸ್ಥಳದಲ್ಲಿ ಎರಡನೇ ದಿನವೂ ಬರೆ ಕುಸಿಯುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ರಸ್ತೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ರಸ್ತೆಯ ಕೆಳಭಾಗ ಇಳಿಜಾರು ಪ್ರದೇಶವಾಗಿದ್ದು, ಭೂಕುಸಿತ ಸಂಭವಿಸಿದರೆ, ರಸ್ತೆಯೇ ಇಲ್ಲದಂತಾಗುತ್ತದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಸಂಗ್ರಹವಾಗಿರುವ ಮಣ್ಣನ್ನು ಯಂತ್ರಗಳ ಮೂಲಕ ಸಾಗಿಸಲಾಗುತ್ತಿದೆ.
ಶಾಂತಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿದೆ. ಬರೆ ಕುಸಿದು ನೀರಿನ ತೋಡುಗಳಲ್ಲಿ ಸಂಗ್ರಹವಾಗಿ ಕೃಷಿ ಭೂಮಿ, ಭತ್ತದ ಗದ್ದೆಗಳಲ್ಲಿ ನೀರು ಮತ್ತು ಹೂಳು ಸಂಗ್ರಹವಾಗಿದೆ ಎಂದು ರೈತರು ತಿಳಿಸಿದ್ದಾರೆ. ಗ್ರಾಮೀಣ ಕೆರೆಗಳು ಭರ್ತಿಯಾಗಿದೆ. ಹೊಳೆ, ತೆರೆಗಳು ಮೈದುಂಬಿ ಹರಿಯುತ್ತಿವೆ.