ಮಾನವ ಸರಪಳಿಗೆ ಕೈ ಜೋಡಿಸಿದ ಜನ

KK
Published on

ರಾಮನಗರ :  ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರಕಿತು.

ಜಿಲ್ಲೆಯ ಗಡಿ ಗ್ರಾಮ ಹೆಜ್ಜಾಲದಿಂದ ಆರಂಭಗೊಂಡು ಮಂಡ್ಯ ಗಡಿಗೆ ಹೊಂದಿಕೊಂಡಿರುವ ಕೋಲೂರು ಗ್ರಾಮದವರೆಗೂ ಸಾವಿರಾರು ಮಂದಿ ಮಾನವ ಸರಪಳಿ ನಿರ್ಮಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಅಧಿಕಾರಿಗಳ ನಿಯೋಜನೆ: ಪ್ರತಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿಗದಿತ ಸಮಯದೊಳಗೆ ಹಾಜರಾಗಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಮಾನವ ಸರಪಳಿಗೆ ವಾನವಸಂಪನ್ಮೂಲವನ್ನು ತರಲು ಅಗತ್ಯವಿರುವೆಡೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.

ಎಲ್ಲೆಲ್ಲಿ ಸರಪಳಿ: ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ 9 ಗಂಟೆಗೆಯಿಂದ ರಾಮನಗರ ಜಿಲ್ಲೆಯ ಗಡಿಭಾಗವಾದ ಹೆಜ್ಜಾಲದ ವೆಳ್ಳಿಯಪ್ಪ ಟೆಸ್ಟೈಲ್ಸ್‌ನಿಂದ ಪ್ರಾರಂಭವಾಗಿ ಶೇಷಗಿರಿಹಳ್ಳಿ, ಮಂಚನಾಯಕನಹಳ್ಳಿ ಲಕ್ಷ್ಮೀಸಾಗರ, ಭೀಮೇನಹಳ್ಳಿ, ಬಿಲ್ಲಕೆಂಪನಹಳ್ಳಿ, ಭೈರಮಂಗಲ ಕ್ರಾಸ್, ಬಿಡದಿ ಟೌನ್, ಕೆಂಚನಕುಪ್ಪೆಗೇಟ್, ಕಲ್ಲುಗೋಪಹಳ್ಳಿ, ಕೆಂಪನಹಳ್ಳಿಗೇಟ್, ಮಾಯಗನಹಳ್ಳಿ, ವಾದಾಪುರಗೇಟ್, ಕೇತೋಹಳ್ಳಿಗೇಟ್, ಬಸವನಪುರಗೇಟ್, ವಡೇರಹಳ್ಳಿ, ಜಿಲ್ಲಾಧಿಕಾರಿ ಕಚೇರಿ, ರಾಮನಗರ ಟೌನ್ ಅರ್ಚಕರಹಳ್ಳಿ, ಜಾನಪದಲೋಕ, ಕೆಂಗಲ್, ವಂದಾರಗುಪ್ಪೆ, ಪೊಲೀಸ್ ತರಬೇತಿ ಕೇಂದ್ರ, ಶೇರು ಹೋಟೆಲ್ ವತ್ತ, ಚನ್ನಪಟ್ಟಣ ಟೌನ್, ದೊಡ್ಡಮಳೂರು, ಭೈರಾಪಟ್ಟಣ, ಮತ್ತಿಕೆರೆ, ಬೆಳಕೆರೆ - ಮುದಗೆರೆ ಗೇಟ್, ಮತ್ತು ಕೋಲೂರು ಗೇಟ್ (ಗಾಂಧಿಗ್ರಾಮ)ವರೆಗೆ ಅಂದಾಜು 51.20 ಕಿ.ಮೀ. ಉದ್ದದ ವಾನವ ಸರಪಳಿಯನ್ನು ನಿರ್ಮಿಸಲಾಗಿತ್ತು.

ಪ್ರಜಾಪ್ರಭುತ್ವದ ಆಶಯ ಎತ್ತಿಹಿಡಿಯೋಣ : ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಸಂವಿಧಾನದ ಮಹತ್ವ ಮತ್ತು ಆಶಯಗಳನ್ನು ಮುಂದಿನ ಪೀಳಿಗೆಗೂ ಉಳಿಸಬೇಕಿದೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಎಲ್ಲ ರೀತಿಯ ಹಕ್ಕು ನೀಡಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಅದರ ಮೌಲ್ಯ ಮತ್ತು ತತ್ವಗಳನ್ನು ಎತ್ತಿ ಹಿಡಿಯಲು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ ಎಂದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ಮಾತನಾಡಿ, ಪ್ರತಿಯೊಬ್ಬರೂ ಸಮಾನವಾಗಿ ಬದುಕುವ ಅವಕಾಶ ನಮಗೆ ದೊರೆತಿದೆ ಎಂದರೆ ಅದು ಸಂವಿಧಾನದಿಂದ. ಇದನ್ನು ನೀಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರು ಪ್ರಾತಃ ಸ್ಮರಣೀಯರು. ಅವರು ಹಾಕಿಕೊಟ್ಟ ಹಾದಿಯಲ್ಲಿ ಅವರ ಆಶಯದಂತೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವೇ ಬದುಕುವ ಮೂಲಕ ಸಂವಿಧಾನ ಉಳಿವಿಗೆ ಕಂಕಣ ಬದ್ಧರಾಗಬೇಕು ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ಪಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್‌ಪಿ, ಕಾರ್ತಿಕ್ ರೆಡ್ಡಿ, ಎಡಿಸಿ ಆರ್. ಚಂದ್ರಯ್ಯ, ಉಪವಿಭಾಗಾಧಿಕಾರಿ ಬಿನೋಯ್ ಮುಂತಾದವರು ಇದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಪ್ರತಿಜ್ಞಾ ವಿಧಿ ಬೋದಿಸಿದರು.

ಸಚಿವ, ಶಾಸಕರು ಗೈರು: ರಾಜ್ಯವೇ ಸಂಭ್ರಮದಿಂದ ಆಚರಣೆ ಮಾಡಿದ ವಾನವ ಸರಪಳಿ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಚಾಲನೀಡಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಚಾಲನೆ ನಿಡುವಂತೆ ಆಯಿತು. ಇನ್ನು ಕಾರ್ಯಕ್ರಮದ ಅಧ್ಯಕ್ಷತೆವಹಿಸಬೇಕಿದ್ದ ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಎಲ್ಲಿಯೂ ಕಾಣಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net