

ಚಿಂತಾಮಣಿ: ಸರ್ಕಾರ ಎ ಮತ್ತು ಬಿ ಖಾತೆ ಮಾಡಿಸಿಕೊಳ್ಳಲು ಆದೇಶ ಹೊರಡಿಸಿದ ಬೆನ್ನಲ್ಲೇ ನಗರಸಭೆಯಿಂದ ವಿವಿಧ ವಾರ್ಡ್‌ಗಳಿಗೆ ತೆರಳಿ ಪ್ರಚಾರ ಕೈಗೊಳ್ಳಲಾಗಿತ್ತು. ಅದರಂತೆ ಒಂದು ವಾರದಿಂದ ಬಿ-ಖಾತೆಗಾಗಿ ಜನ ನಗರಸಭೆಗೆ ಮುಗಿಬಿದ್ದಿದ್ದಾರೆ.
ದುಡ್ಡು ಕೊಟ್ಟು ಆಸ್ತಿ ಖರೀದಿಸಿದರೂ ದಾಖಲೆ ಪಡೆಯಲಾಗದ ಹಿನ್ನೆಲೆ ಹಾಗೂ ಮದುವೆ-ಮುಂಜಿ ಮತ್ತಿತರ ಕಷ್ಟ ಸಮಯದಲ್ಲಿ ನಿವೇಶನ, ಮನೆ ಮಾರಾಟ ಮಾಡಲು ಇ-ಖಾತೆ ಅವಶ್ಯವಾಗಿರುವುದರಿಂದ ಇ-ಖಾತೆ ಇಲ್ಲದೆ ಜನತೆ ಅಸಹಾಯಕರಾಗಿದ್ದರು. ಸರ್ಕಾರ ಎ-ಖಾತಾ ಹಾಗೂ ಅನಧಿಕೃತ ಬಡಾವಣೆಗಳಲ್ಲಿರುವ ಆಸ್ತಿಗಳಿಗೆ ಇ-ಆಸ್ತಿ ಸೃಜನೆ ಮಾಡಲು ಆರಂಭಿಸಿರುವ ಬಿ-ಖಾತೆ ಅಭಿಯಾನದಿಂದ ನಗರದ ಕಟ್ಟಡ ಮತ್ತು ನಿವೇಶನ ಮಾಲೀಕರು ನಾಮುಂದು, ತಾಮುಂದೆ ಎಂದು ನಗರಸಭೆಗೆ ಆಗಮಿಸುತ್ತಿದ್ದಾರೆ.
ಬಿ-ಖಾತೆ ಅಭಿಯಾನದಲ್ಲಿ ಆಸ್ತಿ ಮಾಲೀಕರು ಮದ್ಯವರ್ತಿಗಳ ಮೊರೆ ಹೋಗದೆ, ನೇರವಾಗಿ ನಗರಸಭೆಗೆ ಬಂದು ಬಿ-ಖಾತೆಗೆ ಈ ವರ್ಷದ ಹೆಚ್ಚುವರಿ ತೆರಿಗೆ ಪಾವತಿಸಿ ಇ-ಖಾತೆ ಮಾಡಿಸಿಕೊಳ್ಳಲು ನಗರಸಭೆಯ ಪೌರಾಯುಕ್ತರು, ಸೂಚಿಸಿದ್ದ ಹಿನ್ನೆಲೆಯಲ್ಲಿ, ಖಾತೆಗೆ 25-50 ಸಾವಿರ ರೂ. ಮಧ್ಯವರ್ತಿಗಳಿಗೆ ಪಾವತಿಸುತ್ತಿದ್ದರು. ಈಗ ಆ ಹಣ ಉಳಿತಾಯವಾದಂತಾಗಿದೆ.
ಕೃತಜ್ಞತೆ
ಸೋಮವಾರ ಸುಮಾರು 50ಕ್ಕೂ ಹೆಚ್ಚು ಮಂದಿಗೆ ಇ-ಖಾತೆ ಮಾಡಿಕೊಡಲಾಯಿತು. ನಗರಸಭೆ ಪೌರಾಯುಕ್ತ, ನಗರಸಭೆ ಉಪಾಧ್ಯಕ್ಷರು ಸೇರಿ ಸದಸ್ಯರ ಮೂಲಕ ಜನತೆಗೆ ಇ-ಖಾತೆಗಳ ದಾಖಲೆ ವಿತರಿಸಲಾಯಿತು. ದಾಖಲೆ ಪಡೆದ ಹಲವರು ಸರ್ಕಾರದ ಆದೇಶ, ಸಚಿವರ ಸೂಚನೆ ಮೇರೆಗೆ ನಗರಸಭೆ ಅಧಿಕಾರಿಗಳು ಜವಾಬ್ದಾರಿ ವಹಿಸಿ ಒಂದು ವಾರದಲ್ಲಿ ಖಾತೆ ನೀಡಿದಕ್ಕೆ ಕೃತಜ್ಞತೆ ಸಲ್ಲಿಸಿದರು.