ರಾಮನಗರ
ಜಿಲ್ಲೆಯ ಹಲವೆಡೆ ಗುರುವಾರ ಮಧ್ಯಾಹ್ನ ಭಾರಿ ಸ್ಫೋಟದ ಸದ್ದು ಕೇಳಿರುವುದು ಜನರ ಆತಂಕಕ್ಕೆ ಕಾರಣವಾಗಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಎರಡು ಸಲ ಭಾರಿ ಶಬ್ದ ಕೇಳಿಬಂದಿದೆ. ಶಬ್ದ ಕೇಳಿದ ಬೆನ್ನಲ್ಲೇ ಕೆಲವೆಡೆ ಕಿಟಕಿ, ಬಾಗಿಲುಗಳು ಅಲುಗಾಡಿದ್ದು, ರಾಮನಗರವಾಸಿಗಳು ಆತಂಕದಿಂದ ಮನೆಯಿಂದ ಹೊರ ಬಂದಿದ್ದರು. ಇದು ಭೂಕಂಪನವೇ? ಆಗಸದಲ್ಲಿ ವಾಯುಪಡೆ ಯಾವುದಾದರೂ ತಾಲೀಮು ನಡೆಸಿತ್ತೆ? ಅಥವಾ ಇನ್ನಾವ ಕಾರಣಕ್ಕೆ ಶಬ್ದ ಕೇಳಿತು ಎಂಬುದು ಈವರೆಗೆ ತಿಳಿದಿಲ್ಲ.
ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ಮತ್ತು ಹಾರೋಹಳ್ಳಿಯ ಹಲವು ಗ್ರಾಮಗಳಲ್ಲಿ ಶಬ್ದ ಕೇಳಿಬಂದಿದ್ದು, ಕೆಲವರು ಕಲ್ಲುಗಣಿಯಲ್ಲಿನ ಸ್ಫೋಟ ಎಂದು ಭಾವಿಸಿದ್ದಾರೆ. ಆದರೆ, ಇಡೀ ಜಿಲ್ಲೆಯಲ್ಲಿ ಇದೇ ರೀತಿ ಶಬ್ದ ಕೇಳಿಬಂದಿರುವುದರಿಂದ ಯಾವುದೋ ಒಂದು ಗಣಿಯಿಂದ ಹೊರಬಂದಿರುವ ಸ್ಫೋಟವಂತೂ ಅಲ್ಲ ಎಂದು ಶಂಕಿಸಲಾಗಿದೆ.
ಗುರುವಾರ ಮಧ್ಯಾಹ್ನ ಕೇಳಿದ ಸ್ಫೋಟದ ಶಬ್ದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ಬಗ್ಗೆ ವರದಿಯಾಗಿರುವ ಮಾಹಿತಿ ಬಂದಿಲ್ಲ. ಅಧಿಕೃತ ಮಾಹಿತಿ ಪಡೆದು ನಂತರವಷ್ಟೇ ವಿವರಣೆ ನೀಡಲಾಗುವುದು.
> ರೇಷ್ಮಾ ಉಪನಿರ್ದೇಶಕಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಂ. ದಕ್ಷಿಣ ಜಿಲ್ಲೆ