

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಕಾಂಗ್ರೆಸ್ ಚುನಾವಣೆ ವೇಳೆ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಈಗಾಗಲೇ ಜಾರಿಯಾಗಿದೆ. ಇತರ ನಾಲ್ಕು ಯೋಜನೆಗಳು ಜುಲೈ 1ರಿಂದ ಆರಂಭಗೊಳ್ಳಲಿವೆ.
ಜೂನ್ 15 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿ ಜುಲೈ 15ರವರೆಗೆ ಅವಕಾಶ ನೀಡಲಾಗಿದೆ.
ಅರ್ಹರು ಸಿಎಸ್‌ಸಿ ಕೇಂದ್ರ, ಸೇವಾಸಿಂಧು, ಗಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರ ಒನ್ ಸೇವಾ ಕೇಂದ್ರಗಳಲ್ಲಿ ಜೂ.15 ರಿಂದ ಅರ್ಜಿ ಹಾಕಬೇಕು.
ಜತೆಗೆ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಲಿಂಕ್ ಸೇರಿ ಇತರ ತಾಂತ್ರಿಕ ಪ್ರಕ್ರಿಯೆಗಳು ನಡೆಯಲಿದೆ. ಅರ್ಹತೆ ಇದ್ದರೂ ಹಲವರಿಗೆ ಅರ್ಜಿ ಸಲ್ಲಿಸಲು ಬಹಳಷ್ಟು ಅಡೆತಡೆಗಳಿದ್ದು, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಗೃಹಜ್ಯೋತಿ: 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಈ ಯೋಜನೆಯ ಲಾಭ ಪಡೆಯಲು ಮನೆಯ ಆರ್‌ಆರ್ ಸಂಖ್ಯೆಗೆ ಮನೆಯ ಯಜಮಾನ ಅಂದರೆ ಮನೆಯು ಯಾರ ಹೆಸರಿನಲ್ಲಿದೆಯೋ ಅವರ ಆಧಾರ ಸಂಖ್ಯೆ ಲಿಂಕ್ ಆಗಿರಬೇಕು.
ಬಹಳಷ್ಟು ಜನರ ಮನೆಯ ಆರ್‌ಆರ್ ಸಂಖ್ಯೆ ಈ ಹಿಂದೆ ಮನೆಯ ಯಜಮಾನರಾಗಿದ್ದವರ (ತಂದೆ- ತಾಯಿ ಕುಟುಂಬದ ಹಿರಿಯರು) ಹೆಸರಿನಲ್ಲಿವೆ. ಅವರು ನಿಧನ ಹೊಂದಿದ್ದಾರೆ. ಈಗ ಜೀವಂತವಿರುವವರ ಹೆಸರಿಗೆ ವಿದ್ಯುತ್ ಸಂಪರ್ಕದ ಸಂಖ್ಯೆ(ಆರ್‌ಆರ್ ಸಂಖ್ಯೆ)ಯಲ್ಲಿನ ಹೆಸರು ಮತ್ತು ಮನೆಯ ಆಸ್ತಿ ಸಂಖ್ಯೆಯಲ್ಲಿನ ತಿದ್ದುಪಡಿ ಮಾಡುವುದು ಅನಿವಾರ್ಯವಾಗಿದೆ.
ಆರ್ ಆರ್ ಸಂಖ್ಯೆಯ ಹೆಸರು ಬದಲಾವಣೆಗಾಗಿ ನಿತ್ಯ ನೂರಾರು ಅರ್ಜಿಗಳು ಹೆಸ್ಕಾಂ ಕಚೇರಿಗೆ ಬರುತ್ತಿವೆ. ಮೃತರ ಹೆಸರಿನಲ್ಲಿಯೇ ಇಲ್ಲಿಯವರೆಗೂ ವಿದ್ಯುತ್ ಬಿಲ್ ಕಟ್ಟಿಕೊಂಡು ಬರುತ್ತಿದ್ದವರಿಗೆ ಈಗ ಶಾಕ್ ಎದುರಾಗಿದೆ.
ಗೃಹಲಕ್ಷ್ಮೀ: ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ಈ ಯೋಜನೆಯ ಲಾಭ ಪಡೆಯಲು ಮನೆಯ ಯಜಮಾನಿ ಯಾರು ಎಂಬುದನ್ನು ಕುಟುಂಬದ ಸದಸ್ಯರು ನಿರ್ಧರಿಸಿ ಅರ್ಜಿ ಸಲ್ಲಿಸಬೇಕು.
ಅವಿಭಕ್ತ ಕುಟುಂಬದಲ್ಲಿ ಅತ್ತೆ, ಸೊಸೆ, ಮಗಳು ಕೂಡಿ ಬಾಳುತ್ತಿದ್ದರೆ ಯಾರು ಮನೆಯ ಯಜಮಾನಿ ಎಂಬುದನ್ನು ಕುಟುಂಬಸ್ಥರು ಆಯ್ಕೆ ಮಾಡಬೇಕಿದೆ. ಇಲ್ಲಿ ಮನೆಯ ಎಲ್ಲ ಮಹಿಳಾ ಸದಸ್ಯರು ನಾನೇ ಯಜಮಾನಿ ಎಂದು ವಾದಿಸುವ ಸಾಧ್ಯತೆಗಳೇ ಹೆಚ್ಚು. ಇದರಿಂದ ಅರ್ಜಿಯನ್ನು ಯಾರ ಹೆಸರಿನಲ್ಲಿ ಹಾಕಬೇಕು ಎಂಬ ಜಗಳಗಳು ಮನೆಗಳಲ್ಲಿ ನಡೆದಿದೆ.
ಇನ್ನೂ ಪ್ರತ್ಯೇಕವಾಗಿ ಪಡಿತರ ಚೀಟಿ ಹೊಂದಿರುವ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು ಹಾಗೂ ಪಾನ್ ಕಾರ್ಡ್‌ಗೆ ಆಧಾರ ಲಿಂಕ್ ಆಗಿರಬೇಕು. ಆಧಾರ್ ಕಾರ್ಡ್ ಅನ್ನು ಪ್ಯಾನ್ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಲು ಆಧಾರ್ ಕಾರ್ಡ್‌ಗೆ ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು.
ಅನ್ನಭಾಗ್ಯ: ಜು. 1ರಿಂದ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರಿಗೆ ತಲಾ 10 ಕೆ.ಜಿ. ಅಕ್ಕಿ ವಿತರಣೆ ಯೋಜನೆ ಇದಾಗಿದೆ.
2018ರಿಂದ ಇಲ್ಲಿಯವರೆಗೆ ಬಿಪಿಎಲ್ ಕಾರ್ಡ್‌ಗೆ ಹಾಕಲಾಗಿದ್ದ ಅರ್ಜಿಗಳು ಇನ್ನೂ ಹಂಚಿಕೆಯಾಗಿಲ್ಲ. ಕಳೆದೆರಡು ತಿಂಗಳಿನಿಂದ ಆಹಾರ ಇಲಾಖೆಯ ವೆಬ್‌ಸೈಟ್ ಬಂದ್ ಆಗಿದೆ. ಹೊಸದಾಗಿ ಅರ್ಜಿ ಸಲ್ಲಿಸಲು ಅಥವಾ ತಿದ್ದುಪಡಿಗೆ ಅವಕಾಶವಿಲ್ಲ.
ಈ ಹಿಂದೆ ಹಾಕಲಾಗಿದ್ದ ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ. ಹೀಗಾಗಿ ಜನರು ಪರದಾಡುವಂತಾಗಿದೆ. ಗಂಡ- ಹೆಂಡತಿಯ ಹೆಸರು ಮಾತ್ರ ರೇಷನ್ ಕಾರ್ಡ್‌ನಲ್ಲಿದ್ದು ಮಕ್ಕಳ ಹೆಸರು ಸೇರ್ಪಡೆ ಸಾಧ್ಯವಾಗದಿರುವುದೂ ಇದೆ.
ಮನೆಯ ಯಜಮಾನಿ ಮೃತರಾಗಿದ್ದು, ಅವರ ಹೆಸರನ್ನು ತೆಗೆದು ಹಾಕಲು ಸಾಧ್ಯವಾಗುತಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ, ರಾಜ್ಯ ಮಟ್ಟದಲ್ಲಿಯೇ ಇಲಾಖೆಯ ವೆಬ್‌ಸೈಟ್ ಬಂದ್ ಮಾಡಲಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಸೇವೆ ಪ್ರಾರಂಭಗೊಂಡಿದೆ. ಇನ್ನೂಳಿದ ಯೋಜನೆಗಳ ಜಾರಿಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇಶದಲ್ಲಿಯೇ ಮಾದರಿಯಾದ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಯವಾಗುವುದು ಸಹಜ. ಆದರೂ ಯೋಜನೆಯ ಸದುಪಯೋಗ ಅರ್ಹ ಫಲಾನುಭವಿಗಳಿಗೆ ಲಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. - ಜಿ.ಎಸ್. ಪಾಟೀಲ ಶಾಸಕ