ಅಗತ್ಯ ವಸ್ತು ಖರೀದಿಗಾಗಿ ಮುಗಿಬಿದ್ದ ಜನ

27-hvr-03a
Published on

ಹಾವೇರಿ: ಬುಧವಾರದಿಂದ ಜನತಾ ಕರ್ಫ್ಯೂ ಘೊಷಣೆಯಾಗಿದ್ದರಿಂದ ಮಂಗಳವಾರ ಸುತ್ತಲಿನ ಗ್ರಾಮಗಳ ಜನರು ದಿನಸಿ, ತರಕಾರಿ ಸೇರಿದಂತೆ ಇತರ ಅಗತ್ಯ ವಸ್ತುಗಳ ಖರೀದಿಗೆ ನಗರಕ್ಕೆ ಧಾವಿಸಿದ್ದರು.

ನಗರದ ಮಾರುಕಟ್ಟೆ ಪ್ರದೇಶ, ಬಸ್​ನಿಲ್ದಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಬೆಳಗ್ಗೆಯಿಂದಲೇ ಗುಂಪು-ಗುಂಪಾಗಿ ಸೇರಿ ವಸ್ತುಗಳನ್ನು ಖರೀದಿಸಿದರು. ಬುಧವಾರದಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಇದ್ದರೂ ಬೆಳಗ್ಗೆ 6ರಿಂದ 10ರವರೆಗೆ ಅವಶ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಆದರೂ ಜನರು ಮುಂದೆ ಅವಕಾಶ ಸಿಗುವುದೋ ಇಲ್ಲವೋ ಎಂದುಕೊಂಡು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿಯೇ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು. ತರಕಾರಿ ಖರೀದಿಗೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಂಜೆಯವರೆಗೂ ಅವಕಾಶ ಕಲ್ಪಿಸಲಾಗಿತ್ತು. ಜನರ ಓಡಾಟ ಎಂದಿಗಿಂತ ಹೆಚ್ಚಿತ್ತು.

ಮದುವೆ, ಗೃಹಪ್ರವೇಶ ಇನ್ನಿತರ ಸಮಾರಂಭ ನಿಗದಿ ಮಾಡಿಕೊಂಡಿರುವವರು ಇನ್ನು ಮೇಲೆ ಖರೀದಿಗೆ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ದಿನಸಿ, ಕಾಳುಕಡಿ ಖರೀದಿಸಿದರು. ಬಟ್ಟೆ ಅಂಗಡಿಗಳಲ್ಲಿ ಕೆಲ ವ್ಯಾಪಾರಸ್ಥರು ಬಾಗಿಲು ಹಾಕಿಕೊಂಡೇ ಜವಳಿ ವ್ಯಾಪಾರ ನಡೆಸಿದರು. ಲಂಬಾಣಿ ಜನಾಂಗದ ಕುಟುಂಬದವರೊಬ್ಬರು ಮದುವೆ ಬಟ್ಟೆ ಖರೀದಿಗೆ ವಧು-ವರರ ಕಡೆಯುವರು ಸೇರಿ ಹತ್ತಾರು ಜನ ಬಂದಿದ್ದರು. ಅವರಲ್ಲಿ ಮೂರ್ನಾಲ್ಕು ಜನರಿಗೆ ಮಾತ್ರ ಅವಕಾಶ ಎಂದು ಅಂಗಡಿಯವರು ಹೇಳಿದ್ದರಿಂದ ತಮ್ಮ ಸರದಿ ಬರಲಿ ಎಂದು ಅಂಗಡಿಯ ಹೊರಗಡೆ ಬಿಸಿಲಿನಲ್ಲಿಯೇ ಪುಟ್​ಪಾತ್ ಮೇಲೆ ಕಾಯುತ್ತಾ ಕುಳಿತಿದ್ದ ದೃಶ್ಯ ಕಂಡುಬಂತು.

ಜ್ಯುವೆಲರಿ ಅಂಗಡಿಗಳಲ್ಲೂ ಬಾಗಿಲು ಹಾಕಿಕೊಂಡು ವ್ಯವಹಾರ ನಡೆಸಲಾಯಿತು. ಮದುವೆ ನಿಗದಿ ಮಾಡಿಕೊಂಡವರು ಹಿಂದೆ ಮುಂದೆ ನೋಡದೇ ರೆಡಿ ಇರುವ ಚಿನ್ನಾಭರಣಗಳನ್ನೇ ಖರೀದಿಸಿದರು. ಮದ್ಯದ ಅಂಗಡಿಗಳಲ್ಲೂ ತುಸು ಹೆಚ್ಚೇ ವ್ಯಾಪಾರ ನಡೆಯಿತು. ಇಲ್ಲೆಲ್ಲ ಪರಸ್ಪರ ಅಂತರ ಮಾಯವಾಗಿತ್ತು. ವ್ಯಾಪಾರಸ್ಥರು ಕೋವಿಡ್ ಮಾರ್ಗಸೂಚಿ ಅನುಸರಿಸದೇ ವ್ಯಾಪಾರದಲ್ಲೇ ಮುಳುಗಿದ್ದರು.

ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದ ಜಿಲ್ಲೆಯ ಜನರು ಊರಿಗೆ ಬಂದಿದ್ದರಿಂದ ಹಾಗೂ ಬೇರೆ ಊರುಗಳಿಗೆ ಹೋಗುವವರು ಹೆಚ್ಚಾಗಿದ್ದರಿಂದ ಬಸ್​ನಿಲ್ದಾಣದಲ್ಲಿ ಪ್ರಯಾಣಿಕರ ಜನಸಂದಣಿ ಹೆಚ್ಚಿತ್ತು. ಪರಸ್ಪರ ಅಂತರ, ಮಾಸ್ಕ್ ನಿಯಮವನ್ನೂ ಪಾಲಿಸದೇ ಜನರು ಗುಂಪುಗೂಡಿ ಓಡಾಡುತ್ತಿದ್ದರು.

ಊರಿಗೆ ಮರಳಿದರು!

14 ದಿನಗಳ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರು ನಗರಕ್ಕೆ ಉದ್ಯೋಗ ಅರಸಿ ಹೋಗಿದ್ದವರು ಮರಳಿ ಊರಿಗೆ ಬರುವುದು ಜೋರಾಗಿದೆ. ಬೆಂಗಳೂರು ಕಡೆಯಿಂದ ಬಂದ ರೈಲಿನಲ್ಲಿ ನೂರಾರು ಜನರು ಆಗಮಿಸಿದರು. ನಂತರ ಬಸ್ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ತಮ್ಮೂರ ಕಡೆ ನಡೆದರು. ಇದರಿಂದ ಖಾಸಗಿ ವಾಹನಗಳ ಸಂಚಾರವೂ ಸ್ವಲ್ಪ ಹೆಚ್ಚಾಗಿತ್ತು. ಕೃಷಿ ಪರಿಕರಗಳಾದ ಬೀಜ ಗೊಬ್ಬರ ಖರೀದಿ, ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಜನತೆ, ಕಟ್ಟಡ ಇನ್ನಿತರ ನಿರ್ಮಾಣ ಕಾಮಗಾರಿಗೆ ಬೇಕಾದ ಸಿಮೆಂಟ್, ಕಬ್ಬಿಣ ಖರೀದಿಯೂ ಜೋರಾಗಿತ್ತು. ಇನ್ನು ಎರಡು ವಾರ ಏನೂ ಸಿಗಲ್ಲ ಎಂಬ ಆತಂಕ ಎಲ್ಲರಲ್ಲಿ ಮನೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net