

ಶಿಡ್ಲಘಟ್ಟ : ರೇಷ್ಮೆ ನೂಲು ಬಿಚ್ಚಾಣಿಕೆದಾರರು ರಾಜ್ಯದ ಯಾವುದೇ ಮಾರುಕಟ್ಟೆಗೆ ಹೋಗಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಲ್ಳಬಹುದು ಎಂಬ ಸರ್ಕಾರದ ಆದೇಶವಿದ್ದರೂ ನಗರದ ರೇಷ್ಮೆಗೂಡು ಮಾರುಕಟ್ಟೆಗೆ ನೆರೆಯ ತಾಲೂಕುಗಳಿಂದ ಬರುವ ರೀಲರ್‌ಗಳಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಕಿರುಕುಳ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ಮಾರುಕಟ್ಟೆ ಉಪನಿರ್ದೇಶಕ ಎನ್.ಉಮೇಶ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಸಂಘಟನೆ ತಾಲೂಕು ತಾಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆಗೆ ಪ್ರತಿನಿತ್ಯ 300ರಿಂದ 400 ಲಾಟ್‌ನಷ್ಟು ರೇಷ್ಮೆಗೂಡು ಬರುತ್ತಿದೆ. ನಮ್ಮ ತಾಲೂಕಿನಲ್ಲಿ 1800 ಸಕ್ರಿಯ ಬಿಚ್ಚಾಣಿಕೆದಾರರಿದ್ದು, ಒಂದು ಕೆಜಿ ರೇಷ್ಮೆಗೂಡು 600ರಿಂದ 680 ರೂ. ಹರಾಜಾಗುತ್ತಿದೆ. ಈ ಭಾಗದ ರೈತರು ಬೆಳೆದಿರುವ ರೇಷ್ಮೆಗೂಡಿಗೆ ಉತ್ತಮ ಬೆಲೆ ಸಿಗಬೇಕೆಂದರೆ ಬೇರೆ ಊರುಗಳಿಂದ ಬಿಚ್ಚಾಣಿಕೆದಾರರು ಇಲ್ಲಿನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಕೆಜಿಗೆ 800ರಿಂದ 1000 ರೂ.ವರೆಗೂ ಮಾರಾಟವಾಗುತ್ತದೆ. ಆದ್ದರಿಂದ ಪಕ್ಕದ ಚಿಂತಾಮಣಿ ತಾಲೂಕು ಸೇರಿ ಇತರ ಕಡೆಯಿಂದ ಬಿಚ್ಚಾಣಿಕೆದಾರರಿಗೆ ವಿನಾಕಾರಣ ಕಿರುಕುಳ ನೀಡದೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಎನ್.ಉಮೇಶ್ ಮಾತನಾಡಿ, ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಯಾರಿಗೂ ಉದ್ದೇಶಪೂರ್ವಕವಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಕಿರುಕುಳ ನೀಡಿಲ್ಲ. ಎಲ್ಲರಿಗೂ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.
ರೈತ ಸಂಘದ ಪದಾಧಿಕಾರಿಗಳಾದ ಎಸ್.ಆರ್.ಮಂಜುನಾಥ್, ಬೈರೇಗೌಡ, ಮಾಧವಚಾರ್, ಹರಿಕೃಷ್ಣ, ನಾಗರಾಜ್ ಮತ್ತಿತರರು ಹಾಜರಿದ್ದರು.