ಸ್ಪಟಿಕಲಿಂಗ ದರ್ಶನಕ್ಕೆ ಮುಗಿದು ಬಿದ್ದ ಜನ

Oplus_0
Oplus_0
Published on

ಯಳಂದೂರು: ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿ ಗ್ರಾಮದಲ್ಲಿ ಗುರುವಾರ ಭೀಮನ ಅಮಾವಾಸ್ಯೆ ಪ್ರಯುಕ್ತ ಮಹದೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ಪಟಿಕ ಲಿಂಗ ದರ್ಶನ ಹಾಗೂ ವಿಶ್ವ ಪರಿವರ್ತನ ಆಧ್ಯಾತ್ಮಿಕ ಚಿತ್ರ ಪ್ರದರ್ಶನಕ್ಕೆ ಜನರು ಮುಗಿಬಿದ್ದು ಕಣ್ತುಂಬಿಕೊಂಡರು.

ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ವಿಶ್ವ ಪರಿವರ್ತನಾ ಆಧ್ಯಾತ್ಮಿಕ ಚಿತ್ರ ಪ್ರದರ್ಶನವನ್ನು ಮಹದೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಈ ಚಿತ್ರ ಪ್ರದರ್ಶನವು ಜನರಿಗೆ ಬಹಳ ಉಪಯುಕ್ತವಾಗಿದೆ, ಪರಮಾತ್ಮನ ಪರಿಚಯವನ್ನು ಅರಿತುಕೊಂಡು ಅವನನ್ನು ಧ್ಯಾನ ಮಾಡುವ ಕಲೆಯನ್ನು ಬಹಳ ಸಹಜವಾಗಿ ಓಂ ಶಾಂತಿಯವರು ತಿಳಿಸಿಕೊಡುತ್ತಾರೆ. ಇದರಲ್ಲಿ ಯಾವುದೇ ಮೌಢ್ಯ, ಅಜ್ಞಾನ, ಅಂಧಕಾರವಿಲ್ಲ. ಭಕ್ತಾದಿಗಳು ಸಹಜವಾಗಿ ಮನಸ್ಸಿನ ಶಾಂತಿ, ಸಮಾಧಾನ, ನೆಮ್ಮದಿಯನ್ನು ಕಂಡುಕೊಳ್ಳಬಹುದು ಎಂದರು. ಇಲ್ಲಿ ಇವರು ರಾಜಯೋಗ ಧ್ಯಾನ ತರಗತಿಯನ್ನು ನಡೆಸಲು ಭವನ ನಿರ್ಮಾಣಕ್ಕೆ ನಿವೇಶನವನ್ನು ಸಮಿತಿಯ ಮುಂದೆ ಇಟ್ಟು ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಚಾಮರಾಜನಗರ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ, ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀ ಜೀ ಮಾತನಾಡಿ, ಇಂದು ಗ್ರಾಮೀಣ ಜನರಲ್ಲಿ ದುಶ್ಚಟಗಳು, ಧೂಮಪಾನ, ಮದ್ಯಪಾನ, ಮೌಢ್ಯದಂತಹ ಅನಿಷ್ಟ ಪದ್ಧತಿಗಳು ಮನೆ ಮಾಡಿಕೊಂಡು ಸುಖಮಯ ಜೀವನ ನಡೆಸಲು ಮಾರಕವಾಗಿದೆ. ಇದನ್ನು ನಿರ್ಮೂಲನೆ ಗೊಳಿಸಲು ಈಶ್ವರೀಯ ವಿಶ್ವವಿದ್ಯಾಲಯವು ಹಳ್ಳಿ, ಹಳ್ಳಿಗಳಲ್ಲಿ ಉಚಿತವಾದ ರಾಜಯೋಗದ ಶಿಕ್ಷಣ ಮೂಲಕ ಮೌಲ್ಯಗಳ ಜಾಗೃತಿ ಮೂಡಿಸುತ್ತಿದೆ. ಇಂದು ಮನುಷ್ಯನಿಗೆ ಧೂಮಪಾನ, ಮದ್ಯಪಾನ ಕೆಟ್ಟದು ಅಂತ ಗೊತ್ತಿದ್ದರೂ ಬಿಡುವುದಕ್ಕೆ ಶಕ್ತಿ ಇಲ್ಲ. ಆಧ್ಯಾತ್ಮಿಕ ಜ್ಞಾನ ನಮಗೆ ಬಹಳ ಅವಶ್ಯಕತೆ ಇದೆ ಅಂತ ಗೊತ್ತಿದ್ದರೂ ಹಿಡಿದುಕೊಳ್ಳುವ ಶಕ್ತಿ ಇಲ್ಲ. ಇವೆರಡಕ್ಕೂ ಶಕ್ತಿಯನ್ನು ರಾಜಯೋಗ ಧ್ಯಾನದಿಂದ ಪ್ರಾಪ್ತಿ ಮಾಡಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಬಿ.ಕೆ. ಆರಾಧ್ಯ, ರಾಕೇಶ್, ನಾಗರಾಜ್, ಸುಬ್ಬಣ್ಣ, ಶಿವಕುಮಾರ್, ಬಿ.ಕೆ. ಮಹಾಲಕ್ಷ್ಮಿ, ಗೀತಾ, ಶಾಂಭವಿ, ಜೈ ಶಂಕರ್, ಮೇದಿನಿ ನಾಗಣ್ಣ, ಜಾನಕಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net