

ಬ್ಯಾಡಗಿ: ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರು ಈ ಕುರಿತು ಕ್ರಮ ಕೈಗೊಳ್ಳುವಂತೆ ಪುರಸಭೆಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಮೌನ ವಹಿಸಿರುವುದು ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಶಿವಪುರ ಬಡಾವಣೆ, ಆಡಿನವರ ಓಣಿ, ಗಾಂಧಿನಗರ, ವಾಲ್ಮೀಕಿ ನಗರ, ಮಾಸಣಗಿ ರಸ್ತೆ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಬೀದಿ ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿವೆ. ಈ ಕುರಿತು ಸಂಘ-ಸಂಸ್ಥೆಗಳು, ಸಾರ್ವಜನಿಕರು ನಾಯಿಗಳ ಉಪಟಳ ತಪ್ಪಿಸುವಂತೆ ಆಗ್ರಹಿಸಿದರೂ ಸಂಬಂಧಪಟ್ಟವರಿಂದ ಪರಿಹಾರ ಸಿಕ್ಕಿಲ್ಲ.
ಕಾಟಕ್ಕೆ ಬೇಸತ್ತ ಜನ: ಇಲ್ಲಿನ ಎಸ್ಜೆಜೆಎಂ ಶಾಲೆ ಹಾಗೂ ಗುತ್ತೆಮ್ಮನ ದ್ವಾರಬಾಗಿಲು ಪ್ರದೇಶ ಹಾಗೂ ಶಿವಪುರ ಬಡಾವಣೆ, ಗಾಂಧಿನಗರದ ಹೊರಭಾಗ ಸೇರಿದಂತೆ ಹಲವೆಡೆ ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿವೆ. ಚಿಕ್ಕಮಕ್ಕಳು ಕೈಚೀಲ ಹಾಗೂ ಇನ್ನೇನಾದರೂ ತಿಂಡಿ- ತಿನಿಸು ಒಯ್ಯತ್ತಿದ್ದಲ್ಲಿ ಒಮ್ಮೆಲೇ ದಾಳಿ ಮಾಡಿ ಕಚ್ಚುತ್ತವೆ. ಬೈಕ್ ಸವಾರರಿಗೆ ನಿತ್ಯವೂ ನೀಡುತ್ತಿರುವ ಹಿಂಸೆ ಹೇಳತೀರದು. ಬೆಳಗಾಗುತ್ತಿದ್ದಂತೆ ಪತ್ರಿಕೆ ಹಂಚುವ ಹುಡುಗರು, ಹಾಲು, ಹೂವು, ತರಕಾರಿ, ಮಂಡಕ್ಕಿ ಇತ್ಯಾದಿ ದಿನಸಿಗಳನ್ನು ಮನೆ ಬಾಗಿಲಿಗೆ ತಲುಪಿಸುವವರು ನಾಯಿಗಳ ಕಾಟಕ್ಕೆ ಸುಸ್ತಾಗಿದ್ದಾರೆ. ಕಜ್ಜಿ ಕಾಯಿಲೆ, ಗಾಯಗೊಂಡ ನಾಯಿಗಳು, ವಿವಿಧ ಕಾಯಿಲೆಗಳಿಗೆ ತುತ್ತಾದ ನಾಯಿಗಳು ಬೀದಿಯಲ್ಲಿ ಸುತ್ತಾಡುತ್ತಿವೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಕೂಡಲೆ ತೊಂದರೆ ತಪ್ಪಿಸಲು ಮುಂದಾಗಬೇಕಿದೆ.
ನಾಯಿ ಹೆಚ್ಚಳಕ್ಕೆ ಕಾರಣ: ಪಟ್ಟಣ ವ್ಯಾಪ್ತಿಯಲ್ಲಿ ಈವರೆಗೂ ಪುರಸಭೆಗೆ ಹಾಗೂ ಪಶುಸಂಗೋಪನೆ ಇಲಾಖೆಗೆ ಸಾಕುನಾಯಿಗಳ ಹಾಗೂ ಬೀದಿನಾಯಿಗಳ ನಿರ್ದಿಷ್ಟ ಅಂಕಿ ಸಂಖ್ಯೆ ತಿಳಿದಿಲ್ಲ. ಹಿಂದಿನ ದೂರುಗಳನ್ನಾಧರಿಸಿ ಪುರಸಭೆ ಸಾಕು ನಾಯಿಗಳ ನೋಂದಣಿ, ಬೆಲ್ಟ್ಗಳಿಗೆ ನಂಬರ್ ಅಳವಡಿಸುವ ಗೋಜಿಗೆ ಹೋಗಿಲ್ಲ. ಅಲ್ಲದೆ, ಎಲ್ಲೆಡೆ ತಲೆ ಎತ್ತಿರುವ ಚಿಕನ್ ಹಾಗೂ ಮಾಂಸದಂಗಡಿಗಳು ತ್ಯಾಜ್ಯವನ್ನು ನಿಗದಿತ ಸ್ಥಳಕ್ಕೆ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬೀಸಾಕುತ್ತಿವೆ. ನಾಯಿಗಳ ಇಂತಹ ಆಹಾರ ತಿಂದು ಕೊಬ್ಬಿವೆ. ಪುರಸಭೆ ಹಾಗೂ ಪಶು ಆಸ್ಪತ್ರೆ ವೈದ್ಯಾಧಿಕಾರಿಗಳು ಜಂಟಿಯಾಗಿ ನಾಯಿಗಳಿಗೆ ಲಸಿಕೆ (ವ್ಯಾಕ್ಸಿನ್) ಹಾಕಿಸುವ ಕ್ರಮಕ್ಕೆ ಮುಂದಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಶಿವಪುರ ಬಡಾವಣೆ ಸೇರಿದಂತೆ ಬಹುತೇಕ ವಾರ್ಡ್ಗಳಲ್ಲಿ ಎಲ್ಲೆಂದರಲ್ಲಿ ತಿರುಗಾಡುತ್ತ ಜನರಿಗೆ ತೊಂದರೆ ನೀಡುತ್ತಿರುವ ಬೀದಿನಾಯಿಗಳನ್ನು ಸರೆ ಹಿಡಿಯುವಂತೆ ದೂರು ನೀಡಿದರೂ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರೇ ಹುಚ್ಚು ನಾಯಿ ಹಿಡಿಸಲು ಹಣ ಖರ್ಚು ಮಾಡುತ್ತಿದ್ದಾರೆ. ಹೀಗಾದರೆ, ನಾಗರಿಕರ ಗತಿ ಏನು ? ಪುರಸಭೆಗೆ ಜನರು ತೆರಿಗೆ ಪಾವತಿಸುತ್ತಿಲ್ಲವೆ ?ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಜರುಗಿಸಬೇಕು. | ಶಂಕರ ಕುಸಗೂರು, ಪುರಸಭೆ ಸದಸ್ಯ ಪಟ್ಟಣದಲ್ಲಿ ನಾಯಿಗಳ ಹಾವಳಿ ತಡೆಗಟ್ಟಲು ಸಾರ್ವಜನಿಕರಿಂದ ದೂರು ಬಂದಿದೆ. ನಾಯಿ ಹಿಡಿಯುವ ತಂಡ ಬಂದು ವಾಪಸ್ ಹೋಗಿದೆ. ಪ್ರಾಣಿದಯಾ ಸಂಘ ಹಾಗೂ ಇತ್ಯಾದಿ ಕಾನೂನು ತೊಡಕುಗಳಿಂದ ನಾಯಿ ಸೆರೆ ಹಿಡಿಯಲು ಸಾಧ್ಯವಾಗುತ್ತಿಲ್ಲ. ಸರ್ವ ಸದಸ್ಯರು, ಪಶುವೈದ್ಯಾಧಿಕಾರಿ, ಮುಖ್ಯಾಧಿಕಾರಿ ಜತೆ ಜಂಟಿ ಸಭೆ ನಡೆಸಿ, ಅಭಿಪ್ರಾಯ ಪಡೆದು, ಬೀದಿ ನಾಯಿ ಹಾವಳಿಗೆ ಶಾಶ್ವತ ಪರಿಹಾರ ಹುಡುಕುತ್ತೇವೆ. | ಕವಿತಾ ಸೊಪ್ಪಿನಮಠ, ಪುರಸಭೆ ಅಧ್ಯಕ್ಷೆ ಬೀದಿನಾಯಿಗಳ ನಿಯಂತ್ರಣಕ್ಕೆ ಮೊದಲು ಪುರಸಭೆಯವರು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಬಳಿಕ ಒಟ್ಟು ನಾಯಿಗಳ ಸಂಖ್ಯೆ, ರೋಗಗ್ರಸ್ಥ ನಾಯಿಗಳು ಇತ್ಯಾದಿ ಮಾಹಿತಿ ಸಂಗ್ರಹಿಸಬೇಕು. ಅದಕ್ಕೊಂದು ದಿನ ನಿಗದಿಪಡಿಸಿ ನಾಯಿಗಳನ್ನು ಹಿಡಿದುಕೊಟ್ಟಲ್ಲಿ ಬೇರೆ ಕಡೆಯಿಂದ ವೈದ್ಯ ಸಿಬ್ಬಂದಿಯನ್ನು ಕರೆಸಿ ವ್ಯಾಕ್ಸಿನ್ ಹಾಕಲಾಗುವುದು. ಈ ಕುರಿತು ಸ್ಥಳೀಯ ಅಧಿಕಾರಿಗಳ ಸಭೆ ನಡೆಸಬೇಕು. | ಎನ್.ಎಸ್. ಚೌಡಾಳ, ತಾಲೂಕು ಪಶು ವೈದ್ಯಾಧಿಕಾರಿ