

ಸೋಮವಾರಪೇಟೆ: ಚೌಡ್ಲು ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗೌಡಳ್ಳಿ ಸಹಯೋಗದಲ್ಲಿ ಇತ್ತೀಚೆಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಚೌಡ್ಲು ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತ ನಿಧಿ ವಿಭಾಗದ ವೈದ್ಯಾಧಿಕಾರಿ ಕರುಂಬಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಹಾಗಾಗಿ ಜನರು ರಕ್ತದಾನ ಮಾಡುತ್ತಿದ್ದಾರೆ. ಆದರೂ ಜಿಲ್ಲೆಗೆ ಹೆಚ್ಚಿನ ರಕ್ತದ ಬೇಡಿಕೆಯಿದೆ. ರಕ್ತದಾನದಿಂದ ದಾನಿಗಳ ಅರೋಗ್ಯ ವೃದ್ಧಿಸುತ್ತದೆ. ಅರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲದ ಕಾರಣ, ಹೆಚ್ಚಿನ ಜನರು ರಕ್ತದಾನ ದಾನ ಮಾಡಿ ಇನ್ನೊಂದು ಜೀವವನ್ನು ಉಳಿಸುವ ಮಹಾನ್ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ನೆಗೆಟಿವ್ ಗುಂಪಿನ ರಕ್ತದ ರಕ್ತದ ಕೊರತೆ ಹೆಚ್ಚಾಗಿದೆ. ಅಪರೂಪದ ಗುಂಪಿನ ರಕ್ತದವರು ಅವಶ್ಯಕವಾಗಿ ರಕ್ತದಾನ ಮಾಡಿದರೆ ಉಪಯೋಗವಾಗುತ್ತದೆ. ಇಂತಹ ಅಪರೂಪದ ರಕ್ತದ ಗುಂಪು ಹೊಂದಿರುವವರಿಗೆ ಬೇರ‌್ಯಾವುದೆ ರಕ್ತ ಹೊಂದಿಕೆಯಾಗುವುದಿಲ್ಲ. ಅವರ ಜೀವ ಉಳಿಸಲು ರಕ್ತದಾನ ಮಾಡಬೇಕು ಎಂದು ಹೇಳಿದರು.
ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ನತೀಶ್ ಮಂದಣ್ಣ, ಪಿಡಿಒ ಪೂರ್ಣಕುಮಾರ್, ಸದಸ್ಯರಾದ ಮಹೇಶ್ ತಿಮ್ಮಯ್ಯ, ಜಯಲಕ್ಷ್ಮೀ, ಜ್ಯೋತಿ, ಪ್ರವೀಣ್, ಸಮುದಾಯ ಆರೋಗ್ಯ ಅಧಿಕಾರಿ ಭೂಮಿಕಾ, ಧರಣೇಶ್ ರಾಜ್ ಇದ್ದರು. ಒಟ್ಟು 31 ಜನ ರಕ್ತದಾನ ಮಾಡಿದರು.