ಲೋಡ್ ಶೆಡ್ಡಿಂಗ್‌ನಿಂದ ಜನ ಹೈರಾಣ

ಲೋಡ್ ಶೆಡ್ಡಿಂಗ್‌ನಿಂದ ಜನ ಹೈರಾಣ
Published on

ಪಿ.ವಿ. ಅಂತೋಣಿ ಸಿದ್ದಾಪುರ

ಸಿದ್ದಾಪುರ ವ್ಯಾಪ್ತಿಯಲ್ಲಿ ಲೋಡ್ ಶೆಡ್ಡಿಂಗ್‌ನಿಂದ ಜನರು ಕುಡಿಯುವ ನೀರಿಗೂ ಪರದಾಡುವಂತಾಗಿದೆ.

ವಿರಾಜಪೇಟೆ ತಾಲೂಕಿನ ಸಿದ್ದಾಪುರ, ಮಾಲ್ದಾರೆ, ಚೆನ್ನಯ್ಯನ ಕೋಟೆ, ಗ್ರಾಮೀಣ ಪ್ರದೇಶದಲ್ಲಿ ನಿರಂತರ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ವಿದ್ಯುತ್ ಸಮಸ್ಯೆಯಿಂದ ಜನತೆ ಬೇಸತ್ತಿದ್ದಾರೆ.

ಮನೆಗಳಿಗೆ ಪೂರೈಕೆಯಾಗುವ ಕುಡಿಯುವ ನೀರಿನ ವ್ಯವಸ್ಥೆಯಲ್ಲೂ ಸಮಸ್ಯೆ ಉಂಟಾಗಿದ್ದು, ಜನ ಸಾಮಾನ್ಯರು ಪರದಾಡುವಂತಾಗಿದೆ. ಅಲ್ಲದೆ ವಿದ್ಯುತ್ ಸಂಬಂಧಿತ ಇತರ ಕೆಲಸ ಕಾರ್ಯಗಳಿಗೂ ತೊಂದರೆ ಉಂಟಾಗಿದೆ ಇದರಿಂದ ಜನ ಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಸದ್ಯದಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗುತ್ತಿದ್ದು, ವಿದ್ಯುತ್ ಕಡಿತದಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತಿದೆ.

ಮತ್ತೊಂದೆಡೆ ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ಬೆಳೆಗಾರರು ಕಾಫಿ ತೋಟಗಳಿಗೆ ನೀರು ಹಾಯಿಸಬೇಕಿದ್ದು, ವಿದ್ಯುತ್ ಸಮಸ್ಯೆಯಿಂದ ಇದು ಕೂಡ ಸಾಧ್ಯವಾಗುತ್ತಿಲ್ಲ.

ಸಿದ್ದಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 5 ಮೆಗಾವಾಟ್ ಟ್ರಾನ್ಸ್‌ಫಾರ್ಮರ್ ಕಾರ್ಯ ನಿರ್ವಹಿಸುತ್ತಿದ್ದು, ಇದು ಕೆಲವೊಂದು ಸಂದರ್ಭದಲ್ಲಿ ಕೆಟ್ಟು ಹೋಗಿರುವುದರಿಂದ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ ಎನ್ನಲಾಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಓವರ್ ಲೋಡ್ ಆಗುತ್ತಿದ್ದು, ಲೋಡ್ ಶೆಡ್ಡಿಂಗ್‌ಮಾಮೂಲಿಯಾಗಿದೆ. ಇದಕ್ಕೆ ಪರ್ಯಾಯವಾಗಿ ಸಿದ್ದಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಈಗ ಮತ್ತೊಂದು 5 ಮೆಗಾ ವಾಟ್ ಟ್ರಾನ್ಸ್ ಫಾರ್ಮರ್ ಅಳವಡಿಸಲು ಕಾಮಗಾರಿ ನಡೆಯುತ್ತಿದೆ.

ವಿರಾಜಪೇಟೆ ಮಾರ್ಗವಾಗಿ ಸಿದ್ದಾಪುರ ವಿತರಣಾ ಕೇಂದ್ರಕ್ಕೆ ವಿದ್ಯುತ್ ಸರಬರಾಜಾಗುತ್ತಿದ್ದು, ಈ ಮಾರ್ಗದ ವಿದ್ಯುತ್ ತಂತಿ ತುಂಬ ಹಳೆಯದಾಗಿದ್ದು ಸಣ್ಣ ಕೊಂಬೆ ಬಿದ್ದರೂ ವಿದ್ಯುತ್ ವಿತರಣಾ ಸ್ಥಾವರದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದೆ.

66ಕೆವಿ ವಿದ್ಯುತ್ ಪ್ರಸರಣಾ ಘಟಕಕ್ಕೆ ಒತ್ತಾಯ: ಈ ಭಾಗದಲ್ಲಿ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶೀಘ್ರ 66 ಕೆವಿ ವಿದ್ಯುತ್ ಸ್ಥಾವರ ನಿರ್ಮಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

66ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಪಾಲಿಬೆಟ್ಟ ರಸ್ತೆ ಸಮೀಪ ಟಾಟಾ ಸಂಸ್ಥೆ 2 ಎಕರೆ ಜಾಗವನ್ನು ಇಲಾಖೆಗೆ ನೀಡಿದೆ. ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಮುಂದಿನ ಪ್ರಕ್ರಿಯೆ ನಡೆಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net