

ಮೋಹನ ಪಾಟಣಕರ ಅಥಣಿ ಗ್ರಾಮೀಣ
ಅಥಣಿ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಕೃಷ್ಣಾ ನದಿ ತೀರದ ಬಹುತೇಕ ಗ್ರಾಮಗಳ ತೋಟದ ವಸತಿ ಹಾಗೂ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತಗೊಂಡಿವೆ. ಆ ರಸ್ತೆಗಳ ಮೇಲೆ ಜೀವದ ಹಂಗುತೊರೆದು ಜನರು ಸಂಚರಿಸುತ್ತಿದ್ದಾರೆ.
ಕೃಷ್ಣಾ ನದಿಯಲ್ಲಿ ಶನಿವಾರ 2.65 ಲ ಕ್ಯೂಸೆಕ್ ಒಳಹರಿವಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಕೃಷ್ಣಾ ನದಿಗೆ 3.50 ಲ ಕ್ಯೂಸೆಕ್ನಿಂದ 5 ಲ ಕ್ಯೂಸೆಕ್ವರೆಗೆ ನೀರು ಹರಿದು ಬಂದರೆ ಸಪ್ತಸಾಗರ, ತೀರ್ಥ, ನದಿ ಇಂಗಳಗಾಂವ, ಹುಲಗಬಾಳ, ದರೂರ, ಹಲ್ಯಾಳ, ಖವಟಕೊಪ್ಪ, ಶೇಗುಣಸಿ, ನಂದೇಶ್ವರ, ಮಹಿಷವಾಡಿ, ಜನವಾಡ, ನಾಗನೂರ ಪಿ.ಕೆ., ಝುಂಜರವಾಡ, ಶಿರಹಟ್ಟಿ, ಬಳವಾಡ, ಸವದಿ ಸೇರಿ 22 ಗ್ರಾಮಗಳು ಜಲಾವೃತಗೊಳ್ಳುತ್ತವೆ.
ಇದರಲ್ಲಿ ಶಿರಹಟ್ಟಿ ಗ್ರಾಮದಿಂದ ಅಥಣಿ ಸಂಪರ್ಕ ರಸ್ತೆ ಹೊರತುಪಡಿಸಿ, ಕೊಕಟನೂರ ಗ್ರಾಮದ ಪುನರ್ವಸತಿ ಕೇಂದ್ರ ಹಾಗೂ ಮಿರ್ಜಾಳ ತೋಟದ ವಸತಿ ಪ್ರದೇಶದ ರಸ್ತೆಗಳು ಜಲಾವೃತಗೊಂಡಿವೆ. ಇಲ್ಲಿನ ಜನರು ತಮ್ಮ ಅಗತ್ಯಗಳಿಗಾಗಿ ಜಲಾವೃತ ರಸ್ತೆಗಳಲ್ಲಿಯೇ ಸಂಚರಿಸುತ್ತಿದ್ದಾರೆ.
ಪ್ರವಾಹ ಸಂದರ್ಭದಲ್ಲಿ ಯಾವುದೇ ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸ್ಥಳಿಯ ಅಧಿಕಾರಿಗಳಿಗೆ ಸೂಚಿಸಿದೆ. ಈ ನಿಟ್ಟಿನಲ್ಲಿ ತಹಸೀಲ್ದಾರ್ ನದಿತೀರದ ಪ್ರತಿ ಗ್ರಾಮಗಳಲ್ಲಿ ನೋಡಲ್ ಅಧಿಕಾರಿ ಹಾಗೂ ಸ್ಥಳಿಯ ಗ್ರಾಪಂ ಸಿಬ್ಬಂದಿ ನಿಯೋಜಿಸಿದ್ದಾರೆ. ಆದರೆ, ಬಹುತೇಕ ಅಧಿಕಾರಿಗಳು ಅಪಾಯಕಾರಿ ಸ್ಥಳಗಳಿಗೆ ತೆರಳಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನದಿ ತೀರದ ಗ್ರಾಮಗಳ ಜನರಲ್ಲಿ ಪ್ರವಾಹದ ಅರಿವು ಮೂಡಿಸುವುದರ ಜತೆಗೆ ಯಾವುದೇ ರೀತಿ ತೊಂದರೆಯಾಗದಂತೆ ನಿಗಾವಹಿಸಲು ಸ್ಥಳಿಯ ಗ್ರಾಪಂ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ದೂರು ಬಂದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ. ಸರಿಯಾಗಿ ಕಾರ್ಯನಿರ್ವಹಿಸದಿರುವುದು ಕಂಡುಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
> ಸಿದ್ದರಾಯ ಭೋಸಗಿ
ತಹಸೀಲ್ದಾರ್, ಅಥಣಿ