ಪಿಂಚಣಿ ಸೌಲಭ್ಯಕ್ಕೆ ಅಗತ್ಯ ದಾಖಲೆ ಸಲ್ಲಿಸಿ

13 HANUR 1
Published on

ಹನೂರು: ಅರ್ಹರು ಅಗತ್ಯ ದಾಖಲೆಯನ್ನು ಸಲ್ಲಿಸುವುದರ ಮೂಲಕ ಸರ್ಕಾರದಿಂದ ಸಿಗುವ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಗ್ರೇಡ್ 2 ತಹಸೀಲ್ದಾರ್ ಧನಂಜಯ ತಿಳಿಸಿದರು.


ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಆಣೆಹೊಲ ಗ್ರಾಮದ ವಿಜಿಕೆಕೆ ತರಬೇತಿ ಕೇಂದ್ರದಲ್ಲಿ ಮಂಗಳವಾರ ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಾದ ಅಂಗವಿಕಲ, ವೃದ್ಧಾಪ್ಯ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಯಡಿ ಅರ್ಹ ಫಲಾನುಭವಿಗಳು ಸರ್ಕಾರದಿಂದ ಮಾಸಿಕ ಪಿಂಚಣಿ ಪಡೆಯಬಹುದಾಗಿದೆ. ಇದರ ಸೌಕರ್ಯವನ್ನು ಪಡೆಯದ ಅರ್ಹರು ಕೂಡಲೇ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆ ನೀಡುವುದರ ಮೂಲಕ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಒಟ್ಟು 14 ಅರ್ಜಿಗಳು ಸಲ್ಲಿಕೆಯಾದವು. ಸ್ಥಳದಲ್ಲೇ 5 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರತಿಯನ್ನು ವಿತರಿಸಲಾಯಿತು. ಉಪ ತಹಸೀಲ್ದಾರ್ ಸುರೇಖಾ, ಗ್ರಾಪಂ ಉಪಾಧ್ಯಕ್ಷ ಕೆಂಪಾರೆ, ಸದಸ್ಯರಾದ ಚಂದ್ರು, ಸುಂದರ್, ಮಾದೇವ, ಗ್ರಾಮ ಆಡಳಿತ ಅಧಿಕಾರಿ ಎಂ.ವಿನೋದ್, ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಮಹದೇವಸ್ವಾಮಿ, ಮ.ಬೆಟ್ಟ, ಆಲಂಬಾಡಿ, ಕೊಂಬುಡಿಕ್ಕಿ, ಮೆದಗಾನಾಣೆ, ಮೆಂದಾರೆ, ಪೊನ್ನಾಚಿ ಹಾಗೂ ಗೊರಸಾಣೆ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net