

ಯಲಬುರ್ಗಾ: ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಪಡೆಯುವ ಫಲಾನುಭವಿಗಳ ಪಿಂಚಣಿಯನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ಸರ್ಕಾರ ನಿರ್ಧರಿಸಿದ್ದು, ಖಾತೆಗಳಿಗೆ ಆಧಾರ್ ಸೀಡಿಂಗ್ ಹಾಗೂ ಎನ್‌ಪಿಸಿಐ ಮ್ಯಾಪಿಂಗ್ ಕಡ್ಡಾಯವಾಗಿದೆ ಎಂದು ಗ್ರೇಡ್-2 ತಹಸೀಲ್ದಾರ್ ನಾಗಪ್ಪ ಸಜ್ಜನ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಸಂಧ್ಯಾಸುರಕ್ಷಾ, ವೃದ್ಧಾಪ್ಯ, ಅಂಗವಿಕಲ, ರೈತ ವಿಧವಾ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಯಡಿ ಮಾಶಾಸನ ಪಡೆಯುವ ಪಿಂಚಣಿದಾರರ ಖಾತೆಗಳಿಗೆ ಆಧಾರ್ ಸೀಡಿಂಗ್ ಹಾಗೂ ಎನ್‌ಪಿಸಿಐ ಮ್ಯಾಪಿಂಗ್ ಮಾಡಲು ಯಲಬುರ್ಗಾ ಹೋಬಳಿಯ 515, ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯ 335 ಒಟ್ಟು 850 ಪ್ರಕರಣಗಳು ಬಾಕಿ ಉಳಿದುಕೊಂಡಿವೆ.
ಆಧಾರ್ ಸೀಡಿಂಗ್ ಮಾಡದೇ ಬಾಕಿ ಉಳಿದುಕೊಂಡಿರುವ ಫಲಾನುಭವಿಗಳ ಮಾಹಿತಿ ಆಯಾ ಗ್ರಾಮಗಳ ವ್ಯಾಪ್ತಿಯ ಗ್ರಾಮ ಆಡಳಿತಾಧಿಕಾರಿ ಮತ್ತು ಗ್ರಾಮ ಸಹಾಯಕರ ಹತ್ತಿರ ಇರುತ್ತದೆ. ಫಲಾನುಭವಿಗಳು ತಾವು ಹೊಂದಿರುವ ಬ್ಯಾಂಕ್, ಅಂಚೆ ಕಚೇರಿಗೆ ಆಧಾರ್ ಕಾರ್ಡ್ ಮತ್ತು ಖಾತೆಯ ದಾಖಲೆಗಳೊಂದಿಗೆ ಭೇಟಿ ನೀಡಿ ಆಧಾರ್ ಸೀಡಿಂಗ್ ಹಾಗೂ ಎನ್‌ಪಿಸಿಐ ಮಾಡಿಸಿಕೊಳ್ಳಲು ತಹಸಿಲ್ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಆಧಾರ್ ಸೀಡಿಂಗ್ ಮಾಡಿಸದೇ ಇದ್ದಲ್ಲಿ ಮಾಸಾಶನ ಪಡೆಯುವ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳ್ಳುತ್ತದೆ. ಅಲ್ಲದೆ ಸರ್ಕಾರದ ನಿರ್ದೇಶನದಂತೆ ಫಲಾನುಭವಿಯು ಸತತ ಮೂರು ತಿಂಗಳವರೆಗೂ ತಮ್ಮ ಪಿಂಚಣಿ ಬ್ಯಾಂಕ್ ಖಾತೆಯಿಂದ ಹಣದ ವಹಿವಾಟು ನಡೆಸದೇ ಇದ್ದಲ್ಲಿ ಖಾತೆದಾರರ ಪಿಂಚಣಿಗಳು ಇನ್‌ಆಕ್ಟಿವ್ ಆಗುತ್ತವೆ. ಆದ್ದರಿಂದ ತಿಂಗಳಿಗೆ ಒಮ್ಮೆ ಫಲಾನುಭವಿಗಳು ಹಣದ ವಹಿವಾಟು ನಡೆಸಬೇಕು ಎಂದು ಗ್ರೇಡ್-2 ತಹಸೀಲ್ದಾರ್ ನಾಗಪ್ಪ ಸಜ್ಜನ್ ತಿಳಿಸಿದ್ದಾರೆ.