

ಶಿವಮೊಗ್ಗ: ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ನೆಟ್ವರ್ಕ್ ಸಮಸ್ಯೆ ಪರಿಹರಿಸಲು ಎಲ್ಲ ಕ್ರಮ ಕೈಗೊಂಡಿದ್ದು ಜಿಲ್ಲೆಗೆ ಮಂಜೂರಾಗಿರುವ ಬಿಎಸ್ಎನ್ಎಲ್ ಟವರ್ಗಳನ್ನು ಸರ್ಕಾರಿ ಜಾಗ ಹಾಗೂ ಗ್ರಾಮಗಳ ಸಮೀಪವೇ ನಿರ್ಮಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಅರಣ್ಯ, ಕಂದಾಯ ಇಲಾಖೆ ಹಾಗೂ ಬಿಎಸ್ಎನ್ಎಲ್ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಕೇಂದ್ರದಿಂದ ಜಿಲ್ಲೆಗೆ ಹೊಸದಾಗಿ 261 ಟವರ್ ಮಂಜೂರು ಆಗಿವೆ. ಅವುಗಳನ್ನು ಸ್ಥಾಪಿಸುವ ಸಂಬಂಧ ಕೂಡಲೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಬಹಳ ವರ್ಷಗಳಿಂದ ನೆಟ್ವರ್ಕ್ ಸಮಸ್ಯೆ ಎದುರಾಗಿದೆ. ಕಾರಣಾಂತರಗಳಿಂದ ಸಮಸ್ಯೆ ಬಗೆಹರಿಸುವುದು ವಿಳಂಬ ಆಗುತ್ತಿತ್ತು. ಇದೀಗ ಅನುಮೋದನೆ ದೊರೆತಿದ್ದು ತಕ್ಷಣ ಗುರುತಿಸಿರುವ ಸ್ಥಳಗಳಲ್ಲಿ ಟವರ್ ನಿರ್ಮಿಸುವಂತೆ ಸೂಚಿಸಿದರು.
ಬಿಎಸ್ಎನ್ಎಲ್ ಅಧಿಕಾರಿ ವೆಂಕಟೇಶ್ ಮಾತನಾಡಿ, ಕೇಂದ್ರ ಸರ್ಕಾರ ಜಿಲ್ಲೆಗೆ 249 ಹೊಸ ಟವರ್ ನಿರ್ಮಾಣ ಹಾಗೂ 12 ಟವರ್ಗಳನ್ನು ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ. ಈಗಾಗಲೇ 128 ಟವರ್ಗಳ ನಿರ್ಮಾಣಕ್ಕೆ ಸರ್ವೆ ನಡೆಸಿದ್ದು 64 ಟವರ್ಗಳು ಕಂದಾಯ ಜಾಗದಲ್ಲಿವೆ. 45 ಟವರ್ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತಿವೆ. 5 ಕಡೆ ಕಾಮಗಾರಿ ಆರಂಭಗೊಂಡಿದೆ. ಕೆಲವೆಡೆ ದನಗಳ ಮುತ್ತು ಎಂದು ಇದ್ದರೂ ವಾಸ್ತವದಲ್ಲಿ ಪರಿಶೀಲಿಸಿದಾಗ ಅರಣ್ಯ ಇಲಾಖೆಗೆ ಸೇರಿವೆ. ಹಾಗಾಗಿ ಅರಣ್ಯ ಭಾಗದಲ್ಲಿರುವ ಟವರ್ಗಳಿಗೆ ಇಲಾಖೆಯಿಂದ ಎನ್ಒಸಿ(ನಿರಪೇಕ್ಷಣಾ ಪತ್ರ) ಅಗತ್ಯವಿದೆ ಎಂದು ಸಭೆ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿ, ಈಗಾಗಲೇ 33 ಟವರ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. 10 ಮಾತ್ರ ತಮ್ಮ ಹಂತದಲ್ಲಿ ಬಾಕಿ ಇದ್ದು, ಜು.31ರೊಳಗೆ ಅನುಮತಿ ನೀಡಲಾಗುವುದು. 21 ಟವರ್ ನಿರ್ಮಾಣ ಜಾಗದ ಮ್ಯಾಪಿಂಗ್ ಆಗಿ ಬರಬೇಕಿದ್ದು ಕೂಡಲೇ ಅವುಗಳಿಗೂ ಅನುಮತಿ ನೀಡಲಾಗುವುದು ಎಂದು ಭವರಸೆ ನೀಡಿದರು.
ಎಂಎಲ್ಸಿ ಎಸ್.ರುದ್ರೇಗೌಡ ಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಬಿಎಸ್ಎನ್ಎಲ್ ಟವರ್ಗಳನ್ನು ಮಂಜೂರು ಮಾಡಿದೆ. ತಕ್ಷಣ ಅವುಗಳ ನಿರ್ಮಾಣ ಕಾರ್ಯ ಆಗಬೇಕು. ಈಗ ಹೆಚ್ಚು ಜನ ಮೊಬೈಲ್ ನೆಟ್ವರ್ಕ್ ಅನ್ನು ಅವಲಂಬಿಸಿದ್ದು 5 ನಿಮಿಷ ನೆಟ್ವರ್ಕ್ ಸಿಗದೇ ಹೋದರೂ ಜನರು ಸಹಿಸಿಕೊಳ್ಳುವುದಿಲ್ಲ. ಟವರ್ ನಿರ್ಮಾಣದಿಂದ ಜನರ ಆಕ್ರೋಶಕ್ಕೆ ಸಮಾಧಾನ ಸಿಗಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಲೋಖಂಡೆ, ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ, ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ಡಿಎ್ಒಗಳಾದ ಪ್ರಸನ್ನ ಕೃಷ್ಣ, ಶಿವಶಂಕರ್, ಬಿಎಸ್ಎನ್ಎಲ್ ಅಧಿಕಾರಿ ಕೃಷ್ಣ ಮೊಗೇರ ಉಪಸ್ಥಿತರಿದ್ದರು.
ಜನವಸತಿಗೆ ಸಮೀಪವಿರಲಿ
ಬಿಎಸ್ಎನ್ಎಲ್ ಟವರ್ಗಳನ್ನು ಸಾಧ್ಯವಾದಷ್ಟು ಜನವಸತಿ ಇರುವ ಕಡೆಗಳಲ್ಲೇ ನಿರ್ಮಾಣ ಮಾಡಬೇಕು. ಇಲ್ಲವಾದರೆ ನಿರ್ವಹಣೆ ಮಾಡುವುದು ಕಷ್ಟ ಆಗಲಿದೆ ಎಂದು ಡಿಸಿ ಡಾ. ಸೆಲ್ವಮಣಿ ತಿಳಿಸಿದರು. ನಮ್ಮ ಹಳ್ಳಿಯಲ್ಲೂ ಗ್ರಾಮದಿಂದ ದೂರದಲ್ಲಿ ಟವರ್ ನಿರ್ಮಾಣ ಮಾಡಿದ್ದರು. ಆರು ತಿಂಗಳ ಬಳಿಕ ಕಾವಲುಗಾರನೂ ಹೋಗುವುದು ನಿಲ್ಲಿಸಿದ್ದ. ಆನಂತರ ಟವರ್ನಲ್ಲಿದ್ದ ಯಂತ್ರೋಪಕರಣ ಸೇರಿ ಎಲ್ಲ ಸಾಮಗ್ರಿಗಳ ಕಳ್ಳತನ ಆಗಿತ್ತು. ಅಂತಿಮವಾಗಿ ನಮ್ಮ ದೊಡ್ಡಪ್ಪನ ಜಮೀನಿನನ್ನು ಬಾಡಿಗೆಗೆ ಪಡೆದು ಟವರ್ ನಿರ್ಮಾಣ ಮಾಡಬೇಕಾಯಿತು ಎಂದು ತಮ್ಮೂರಿನ ಕಥೆಯನ್ನು ಬಿಚ್ಚಿಟ್ಟರು. ಜನವಸತಿಯಿಂದ ದೂರ ಟವರ್ ನಿರ್ಮಿಸಿದರೆ ಕಳ್ಳತನದ ಸಾಧ್ಯತೆ ಹೆಚ್ಚು. ನಿರ್ವಹಣೆ ಮಾಡುವುದೂ ಸುಲಭವಲ್ಲ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದ್ದು ಆಲೋಚನೆ ಮಾಡಿ ಸರಿಯಾದ ಸ್ಥಳಗಳಲ್ಲಿ ಟವರ್ ನಿರ್ಮಿಸಿ ಎಂದು ಸಲಹೆ ನೀಡಿದರು.
ಚುನಾವಣೆ ಬಹಿಷ್ಕರಿಸಿದ್ದ ಗ್ರಾಮಕ್ಕೆ ಟವರ್!
ಭದ್ರಾವತಿ ತಾಲೂಕಿನ ಕನಸಿನಕಟ್ಟೆ ಗ್ರಾಮಕ್ಕೆ ಬಿಎಸ್ಎನ್ಎಲ್ ಟವರ್ ಮಂಜೂರಾಗಿದೆ. ಜತೆಗೆ ಟವರ್ ನಿರ್ಮಾಣವೂ ಆರಂಭಗೊಂಡಿದೆ ಎಂದು ಬಿಎಸ್ಎನ್ಎಲ್ ಅಧಿಕಾರಿಯೊಬ್ಬರು ಸಭೆಗೆ ಮಾಹಿತಿ ನೀಡಿದರು. ಗ್ರಾಪಂನಿಂದ ಮೊದಲು ನೀಡಿದ್ದ ಜಾಗವನ್ನು ಬದಲಾಯಿಸಿಕೊಡಲಾಗಿದೆ. ಈಗ ಟವರ್ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿದೆ ಎಂದರು. ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಗ್ರಾಮಸ್ಥರು ಕಳೆದ ವಿಧಾನಸಭಾ ಚುನಾವಣೆಯನ್ನೇ ಬಹಿಷ್ಕರಿಸಿ ಜಿಲ್ಲಾಡಳಿತದ ಗಮನ ಸೆಳೆದಿದ್ದರು. ಅಂದು ಗ್ರಾಮಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಟವರ್ ನಿರ್ಮಾಣದ ಭರವಸೆ ನೀಡಿದ್ದರು.