

ಕಡಬ: ನಿವೃತ್ತ ನೌಕರರಿಗೆ ಸಿಗಬೇಕಾದ ಹಕ್ಕಿನ ಮೊತ್ತ ಸಿಗುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ನಮ್ಮ ಸಮಸ್ಯೆ ಮುಟ್ಟಿಸಿ 7ನೇ ವೇತನ ಆಯೋಗದಡಿ ಪಿಂಚಣಿ ಸೌಲಭ್ಯ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಘಟಕದ ಸಹ ಸಂಚಾಲಕಿ ಮಂಜುಳಾ ಹೇಳಿದರು.
ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತರಾದ ನೌಕರರಿಗೆ 6ನೇ ವೇತನ ಆಯೋಗದಡಿ ಪಿಂಚಣಿ ಸೌಲಭ್ಯ ನೀಡಲಾಗುತ್ತಿದ್ದು ಇದನ್ನು ಪರಿಷ್ಕರಿಸಿ 7ನೇ ವೇತನ ಆಯೋಗದಡಿ ನೀಡಬೇಕು. ಜೂ.1 2022ರಿಂದ ಜು.31, 2024ರ ಅವಧಿಯಲ್ಲಿ 17,632 ಮಂದಿ ನೌಕರರು ವಿವಿಧ ಇಲಾಖೆಗಳಿಂದ ನಿವೃತ್ತರಾಗಿದ್ದಾರೆ. ಈಗ ನೀಡುತ್ತಿರುವ ಪಿಂಚಣಿ ವ್ಯವಸ್ಥೆಯಲ್ಲಿ ಕಡಿಮೆ ಪಿಂಚಣಿ ಸೌಲಭ್ಯ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ನಮ್ಮ ಸಮಸ್ಯೆ ಮುಟ್ಟಿಸುವ ಕೆಲಸ ನಡೆಸಲಾಗುತ್ತಿದೆ ಎಂದರು. ಕಡಬ ತಾಲೂಕು ಸಂಚಾಲಕ ಗಣೇಶ್ ಪಿ. ಮಾತನಾಡಿದರು.
ಜಿಲ್ಲಾ ವೇದಿಕೆಯ ಸಹ ಸಂಚಾಲಕಿ ವಿಜಯಾ ಪೈ, ಪುತ್ತೂರು ತಾಲೂಕು ಘಟಕದ ಸಂಚಾಲಕ ಜೆರಾಲ್ಡ್ ಮಸ್ಕರೇನಸ್ ಉಪಸ್ಥಿತರಿದ್ದರು. ಕಡಬ ತಾಲೂಕು ಸಹ ಸಂಚಾಲಕಿ ಸೂಸಮ್ಮ ಪಿ.ಎಸ್. ವಂದಿಸಿದರು.