ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ

Bel_veterinary
Published on

ಮನೋಹರ ಬಳಂಜ ಬೆಳ್ತಂಗಡಿ

ದ.ಕ.ಜಿ.ಪಂ ಅಡಿ ಕಾರ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಪಶು ಸಂಗೋಪನೆ ಇಲಾಖೆಯಲ್ಲಿ ಮಂಜೂರಾಗಿರುವ 82 ಹುದ್ದೆಗಳಲ್ಲಿ 63 ಹುದ್ದೆಗಳು ಖಾಲಿ ಬಿದ್ದಿವೆ. ತಾಲೂಕಿನಲ್ಲಿ ಈ ಹಿಂದಿನ ಜಾನುವಾರು ಗಣತಿ ಪ್ರಕಾರ 67,119 ಹಸು, 492 ಎಮ್ಮೆ, 550 ಹಂದಿ, 17 ಕುರಿ, 3,064 ಆಡುಗಳು ಸೇರಿ 71,242 ಜಾನುವಾರುಗಳಿವೆ. 3 ಪಶು ಆಸ್ಪತ್ರೆ, 9 ಪಶು ಚಿಕಿತ್ಸಾಲಯ, 8 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಬೆಳ್ತಂಗಡಿ, ಧರ್ಮಸ್ಥಳ ವೇಣೂರುಗಳಲ್ಲಿ ಪಶು ಆಸ್ಪತ್ರೆ, ಅಂಡಿಂಜೆ, ನಾರಾವಿ, ಬಾರ್ಯ, ಮಡಂತ್ಯಾರು, ಉಜಿರೆ, ಕಳೆಂಜೊಟ್ಟು (ನೆರಿಯ), ಕೊಕ್ಕಡ, ಅಳದಂಗಡಿಗಳಲ್ಲಿ ಪಶು ಚಿಕಿತ್ಸಾಲಯಗಳು, ಕಿಲ್ಲೂರು, ಕೇಳ್ತಾಜೆ, ಅರಸಿನಮಕ್ಕಿ, ಕಾಯರ್ತಡ್ಕ, ಕುಪ್ಪೆಟ್ಟಿ, ಮೊಗ್ರು, ಮುಂಡಾಜೆ, ಗರ್ಡಾಡಿಗಳಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಇವೆ. ಇಲ್ಲೆಲ್ಲ ಸಿಬ್ಬಂದಿ ಕೊರತೆ ಶಾಪವಾಗಿ ಪರಿಣಮಿಸಿದೆ.

ಕೆಲವು ಕೇಂದ್ರಗಳಲ್ಲಿ ಓರ್ವ ಸಿಬ್ಬಂದಿ ಕೇಂದ್ರದ ಎಲ್ಲ ಹುದ್ದೆಗಳ ಏಕಪಾತ್ರಾಭಿನಯ ಮಾಡುವ ಅನಿವಾರ್ಯತೆ ಇದೆ. ಪಶುಗಳ ಚಿಕಿತ್ಸೆಗೆ ಹೊರ ಹೋಗುವ ಸಂದರ್ಭ ಕೇಂದ್ರಕ್ಕೆ ಬೀಗ ಜಡಿಯ ಬೇಕಾದ ಪರಿಸ್ಥಿತಿ ಇದೆ. ಇನ್ನು ಕೆಲವೊಂದು ಹುದ್ದೆಗಳಿಗೆ ಎರಡು-ಮೂರು ಕೇಂದ್ರಗಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಒಂದೂ ಕೇಂದ್ರದ ಕೆಲಸವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಖಾಲಿ ಇರುವ 31 ಡಿ ದರ್ಜೆ ನೌಕರರಲ್ಲಿ 15 ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದ್ದರೂ ಉಳಿದಿರುವ ಅಗತ್ಯ ಸ್ಥಳಗಳಿಗೆ ನಿಯೋಜನೆಗೊಳಿಸಿಲ್ಲ. ಪ್ರತಿ ಬುಧವಾರ ಹಾಗೂ ಗುರುವಾರ ಸಂಚಾರಿ ಪಶು ಘಟಕವಿದ್ದು ಈಗಿರುವ ಸಿಬ್ಬಂದಿಯೇ ಇದನ್ನು ನೋಡಿಕೊಳ್ಳಬೇಕಾಗಿದೆ.

ಹೆಚ್ಚುವರಿ ಜವಾಬ್ದಾರಿ

ಪಶು ಸಂಗೋಪನೆ ಇಲಾಖೆ ಸಿಬ್ಬಂದಿ ಕೊರತೆಯಿಂದ ನಲುಗುತ್ತಿದೆ. ಸಿಬ್ಬಂದಿಗೆ ಇಲಾಖೆಯ ಬೇರೆ ಬೇರೆ ಯೋಜನೆಗಳ ಜವಾಬ್ದಾರಿ ನೀಡುತ್ತಿದೆ ಜಾನುವಾರು ಕೃತಕ ಗರ್ಭಧಾರಣೆ, ರೇಬಿಸ್ ಲಸಿಕೆ, ಕಾಲುಬಾಯಿ ಲಸಿಕೆ, ಕಂದು ರೋಗ ಲಸಿಕೆ, ಗಳಲೆ ರೋಗ ಲಸಿಕೆ, ಕೋಳಿಗಳಲ್ಲಿ ಕೊಕ್ಕರೆ ರೋಗ, ಆಡು, ಕುರಿಗಳಿಗೆ ಸಿಡುಬು ಲಸಿಕೆ, ಜಾನುವಾರುಗಳಿಗೆ ಕಿವಿಯೋಲೆ ಹಾಕುವುದು, ಬರಡು ರಾಸು ಚಿಕಿತ್ಸೆ, ಜಾನುವಾರು ವಿಮೆ, ಪಶು ಭಾಗ್ಯ, ಅಮೃತ ಯೋಜನೆ, ಜಾನುವಾರು ಪ್ರದರ್ಶನ, ಮಾದರಿ ಸಮೀಕ್ಷೆ ಸೇರಿದಂತೆ ಅನೇಕ ಶಿಬಿರಗಳನ್ನು ಏರ್ಪಡಿಸಬೇಕು. ಜತೆಗೆ ದೈನಂದಿನ ಮಾಹಿತಿಯನ್ನು ತಂತ್ರಾಂಶದ ಮೂಲಕ ದಾಖಲಿಸಿ ಸಲ್ಲಿಸಬೇಕು. ಗ್ರಾಮಸಭೆಗಳಿಗೆ ಹಾಜರಾಗಬೇಕು. ಜಾನುವಾರುಗಳ ಆರೋಗ್ಯ ದೃಢೀಕರಣ, ಮರಣೋತ್ತರ ಪರೀಕ್ಷೆ, ನಾನಾ ಯೋಜನೆಗಳಿಗೆ ಪರವಾನಗಿ, ಪರಿಹಾರ ಧನ ಸಂಬಂಧಿತ ಕಾರ್ಯಗಳನ್ನು ನಡೆಸಬೇಕಾಗಿದೆ. ಈ ಎಲ್ಲ ವ್ಯವಸ್ಥೆಗಳಲ್ಲಿ ತೊಡಗುವ ಸಿಬ್ಬಂದಿ ಹೈರಾಣರಾಗುತ್ತಿದ್ದಾರೆ. ಪ್ರಗತಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ಶೇ.100 ಗುರಿ ತಲುಪಬೇಕಾದ ಜವಾಬ್ದಾರಿ ಹೊರಿಸಲಾಗುತ್ತಿದೆ.

ಕಟ್ಟಡದ ದುರಸ್ತಿಗೆ ಸಿಗದ ಅನುದಾನ

ಅವಿಭಜಿತ ದ.ಕ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕು ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾಲು ಒದಗಿಸುವುದರಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದರು ಜಾನುವಾರುಗಳ ಹೈನುಗಾರರ ಅಭಿವೃದ್ಧಿಯಲ್ಲಿ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ಋಣಾತ್ಮಕ ಪರಿಣಾಮ ಬೀರುತ್ತಿರುವುದು ವಿಷಾದನೀಯ. ಅನೇಕ ಯೋಜನೆಗಳು ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವುದಿಲ್ಲ. ಇದರ ಜತೆ ಕೆಲವು ಕೇಂದ್ರಗಳ ಕಟ್ಟಡಗಳು ದುರಸ್ತಿಗೆ ಸರಿಯಾದ ಅನುದಾನ ಮಂಜೂರಾಗುತ್ತಿಲ್ಲ ಎಂಬ ಕೂಗು ಹೇಳಿ ಬರುತ್ತಿದೆ.

ಸಿಗದ ಪಶು ಸಂಜೀವಿನಿ ಸೇವೆ

ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಪಶು ಸಂಜೀವಿನಿ ವ್ಯವಸ್ಥೆಗೆ ಕರೆ ಸಿಗದ ಕಾರಣ ಈ ಸೇವೆ ತ್ವರಿತವಾಗಿ ಲಭಿಸುತ್ತಿಲ್ಲ ಎಂದು ಹೈನುಗಾರರು ದೂರುತ್ತಿದ್ದಾರೆ. 1962 ಸಂಖ್ಯೆಗೆ ಕರೆ ಮಾಡಿದರೆ ತಾಲೂಕಿನ ಯಾವುದೇ ಮೂಲೆಗೂ ಪಶು ಸಂಜೀವಿನಿ ಆಂಬುಲೆನ್ಸ್ ಆಗಮಿಸಿ ಪಶುಗಳಿಗೆ ತುರ್ತು ಚಿಕಿತ್ಸೆ ನೀಡುತ್ತದೆ. ಇದರಲ್ಲಿ ಓರ್ವ ವೈದ್ಯ, ಇಬ್ಬರು ಸಿಬ್ಬಂದಿ ಇರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ 1962 ಸಂಖ್ಯೆಗೆ ಕರೆ ಸಿಗುತ್ತಿಲ್ಲ. ಎಷ್ಟು ಬಾರಿ ಪ್ರಯತ್ನಿಸಿದರು ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಇದಕ್ಕೆ ಲೈನ್‌ಗಳನ್ನು ಹೆಚ್ಚಿಸಬೇಕಾದ ಅಗತ್ಯವಿದೆ.

ಹುದ್ದೆಗಳ ವಿವರ

ಒಟ್ಟು-ಭರ್ತಿ-ಖಾಲಿ ಮುಖ್ಯ ಪಶುವೈದ್ಯಾಧಿಕಾರಿ 5 -2- 3 ಪಶುವೈದ್ಯಾಧಿಕಾರಿ 9-2-7 ಜಾನುವಾರು ಅಭಿವೃದ್ಧಿ ಅಧಿಕಾರಿ 1-1-0 ಜಾನುವಾರು ಅಧಿಕಾರಿ 2-2-0 ಹಿರಿಯ ಪಶು ವೈದ್ಯ ಪರೀಕ್ಷಕ 12-7-5 ಪಶುವೈದ್ಯ ಪರೀಕ್ಷಕ 6-4-2 ಕಿರಿಯ ಪಶು ವೈದ್ಯಕೀಯ ಪರೀಕ್ಷೆ 14 -0-14 ವಾಹನ ಚಾಲಕ 1-0-1 ದ್ವಿತೀಯ ದರ್ಜೆ ಸಹಾಯಕ 1-1-0 ಡಿ ದರ್ಜೆ 31- 0- 31

ಖಾಲಿ ಹುದ್ದೆಗಳ ಬಗ್ಗೆ ಮೇಲಧಿಕಾರಿಗಳಿಗೆ ಬರೆದುಕೊಳ್ಳಲಾಗಿದೆ. ಹಲವು ಕಾರ್ಯಕ್ರಮಗಳಿಗೆ ಕೆಎಂಎಫ್‌ನವರು ಸಹಕಾರ ನೀಡುತ್ತಿದ್ದಾರೆ. ಪಶುಸಖಿಯರ ಸಹಾಯವನ್ನು ತೆಗೆದುಕೊಂಡು ಹಲವಾರು ಕೆಲಸ ಮಾಡಲಾಗುತ್ತಿದೆ. ಸಿಬ್ಬಂದಿ ಕೊರತೆ ಬಿಟ್ಟರೆ ಇತರ ಯಾವುದೇ ಹೆಚ್ಚಿನ ಸಮಸ್ಯೆ ಇಲ್ಲ. - ಡಾ.ರವಿಕುಮಾರ್, ಮುಖ್ಯ ಪಶುವೈದ್ಯಾಧಿಕಾರಿಗಳು ( ಆಡಳಿತ ) ಪಶು ಆಸ್ಪತ್ರೆ, ಬೆಳ್ತಂಗಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net