

ಹಾಸನ: ನಗರದ ಪೆಂಡಾಲ್ ಗಣಪತಿಯ 71ನೇ ವಿಸರ್ಜನಾ ಮಹೋತ್ಸವ ಮೆರವಣಿಗೆಗೆ ಶನಿವಾರ ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕ ಎಚ್.ಪಿ.ಸ್ವರೂಪ್, ಮೇಯರ್ ಗಿರೀಶ್ ಚನ್ನವೀರಪ್ಪ ಇತರರು ಕರ್ಪೂರ ಹಚ್ಚಿ, ಪುಷ್ಪಾರ್ಚನೆ ಮಾಡಿ, ಈಡುಗಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು.
ನಗರದ ಸಿಟಿ ಬಸ್ ನಿಲ್ದಾಣದ ಬಳಿಯ ಗಣಪತಿ ಪೆಂಡಾಲ್ ಮುಂಭಾಗ ಹೂವಿನಿಂದ ಅಲಂಕೃತಗೊಂಡ ರಥದ ಮೇಲೆ ವಿರಾಜಮಾನವಾಗಿದ್ದ ಗಣಪತಿಗೆ ಪೂಜೆ ಸಲ್ಲಿಸಿ ಬೆಳಗ್ಗೆ 10.45ಕ್ಕೆ ಚಾಲನೆ ನೀಡಲಾಯಿತು. 30ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿ ಗಮನ ಸೆಳೆದವು. ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಈ ವೇಳೆ ಮಾತನಾಡಿದ ಸಂಸದ ಶ್ರೇಯಸ್ ಎಂ.ಪಟೇಲ್, ಕಳೆದ ಏಳೂವರೆ ದಶಕಗಳಿಂದ ಶ್ರೀ ಗಣಪತಿ ಸೇವಾ ಸಮಿತಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಗಣೇಶ ಚತುರ್ಥಿ ಆರಂಭ ದಿನದಿಂದ ವಿಸರ್ಜನೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಸಮಿತಿ ಮೆಚ್ಚುಗೆಗೆ ಪಾತ್ರವಾಗಿದೆ. ಪರಸ್ಪರ ಸ್ನೇಹ, ಏಕತೆ, ಸಾಮರಸ್ಯ, ಭ್ರಾತೃತ್ವದ ಸಂಕೇತವಾದ ಶ್ರೀ ಗಣೇಶ ಎಲ್ಲರಿಗೂ ಒಳಿತು ಮಾಡಲಿ, ಶ್ರೀ ಗಣೇಶನ ಆಶೀರ್ವಾದದಿಂದ ನಾಡಿನಲ್ಲಿ ಶಾಂತಿ, ಸಮೃದ್ಧಿ, ಸಂತೋಷ ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿದರು.
ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ನಗರದ ಪೆಂಡಾಲ್ ಗಣಪತಿಯ ವಿಸರ್ಜನಾ ಮೆರವಣಿಗೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಶ್ರೀ ಗಣಪತಿ ಸೇವಾ ಸಂಸ್ಥೆಯಿಂದ ಪ್ರತಿ ವರ್ಷ ಆಕರ್ಷಕವಾಗಿ ಗಣಪತಿ ಮೆರವಣಿಗೆ ನಗರದ ರಾಜ ಬೀದಿಗಳಲ್ಲಿ ಸಾಗುತ್ತಿದೆ. ಶ್ರೀ ಗಣೇಶ ಎಲ್ಲರಿಗೂ ಒಳಿತನ್ನು ಮಾಡಲಿ. ಸಮಿತಿ ಅಧ್ಯಕ್ಷ ಡಾ. ಎಚ್. ನಾಗರಾಜು ಮತ್ತು ಪದಾಧಿಕಾರಿಗಳು ತುಂಬ ಅಚ್ಚುಕಟ್ಡಾಗಿ ಮೆರವಣಿಗೆ ಆಯೋಜನೆ ಮಾಡಿದ್ದಾರೆ. ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಶಾಂತಿಯುತವಾಗಿ ಉತ್ಸವ ನಡೆಯಲಿ ಎಂದರು.
ಮೆರವಣಿಗೆ ಗಣಪತಿ ಪೆಂಡಾಲ್‌ನಿಂದ ಹೊರಟು ಶಿವನಂಜಪ್ಪ ವೃತ್ತ, ಗಾಂಧಿ ಬಜಾರ್, ಹಾಸನಾಂಬ ವೃತ್ತ, ಸಂತೆ ಪೇಟೆ, ಹೊಸ ಲೈನ್ ರಸ್ತೆ, ಅರಳೇಪೇಟೆ ರಸ್ತೆ, ಪಾರ್ಕ್ ರಸ್ತೆ, ಸ್ಲೇಟರ್ಸ್ ವೃತ್ತ, ದೊಡ್ಡಿ ರೋಡ್, ಮಹಾವೀರವೃತ್ತ, ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ನಂದಿ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಬ್ಯಾಂಡ್ ಸೆಟ್, ಕೀಲು ಕುದುರೆ, ಬೆದರು ಬೊಂಬೆ ಪ್ರದರ್ಶನ, ಹುಲಿ ವೇಷ, ಕುರುಬನ ವೇಷ, ಬೃಹತ್ ಈಶ್ವರ ಮತ್ತು ಮಾರುತಿ ಪ್ರತಿಮೆ, ಮರಗಾಲು ಮನುಷ್ಯ, ಮಹಿಳೆಯರಿಂದ ಡೊಳ್ಳು ಕುಣಿತ, ಕೊಡಗಿನ ನೃತ್ಯ, ಬೆಂಕಿಯಲ್ಲಿ ಸಾಹಸ ಸೇರಿದಂತೆ ವಿವಿಧ ತಂಡಗಳು ಭಾಗವಹಿಸಿ ಗಮನ ಸೆಳೆದವು.
ಸಾರ್ವಜನಿಕರು, ಯುವಕ-ಯುವತಿಯರು ಮೆರವಣಿಗೆ ಉದ್ದಕ್ಕೂ ಕುಣಿದು ಕುಪ್ಪಳಿಸಿದರು, ಪೆಂಡಲ್ ಗಣಪತಿ ಉತ್ಸವದ ಅಂಗವಾಗಿ ನಗರದ 19ನೇ ವಾರ್ಡಿನ ಅರಳೇಪೇಟೆ ನಿವಾಸಿಗಳು, ಅಂಗಡಿ ಮಾಲೀಕರಿಂದ ಅನ್ನದಾನ, ಶ್ರೀಬಸವೇಶ್ವರ ಕಲ್ಯಾಣ ಮಂಟಪ ಬಳಿ, ಸಹ್ಯಾದ್ರಿ ವೃತದಲ್ಲಿ ಸೇರಿದಂತೆ ಹಲವಾರು ಕಡೆ ಅನ್ನಸಂತರ್ಪಣೆ ಮಾಡಿದ್ದರು.
ನಗರದ ದೇವಿಗೆರೆಯಲ್ಲಿ ತೆಪ್ಪೋತ್ಸವದ ನಂತರದ ಗಣಪತಿ ವಿಸರ್ಜಿಸಲಾಯಿತು. ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ.ಎಚ್.ನಾಗರಾಜು, ಮಹಾನಗರ ಪಾಲಿಕೆ ಮೇಯರ್ ಗಿರೀಶ್ ಚನ್ನವೀರಪ್ಪ, ಉಪ ಮೇಯರ್ ಹೇಮಲತಾ ಕಮಲ್ ಕುಮಾರ್, ಧರ್ಮದರ್ಶಿಗಳಾದ ಲಲಾಟ್ ಮೂರ್ತಿ, ಬೂದೇಶ್, ಎಚ್.ಟಿ.ಶೇಖರ್, ಎಚ್.ಎಸ್.ಅನಂತನಾರಾಯಣ, ಎನ್.ಎಸ್. ಶಂಕರರಾವ್, ಎಚ್.ಎಂ.ಟಿ.ಸುರೇಶ್ ಕುಮಾರ್, ಎಂ.ಕೆ.ಕಮಲ್ ಕುಮಾರ್, ಎಚ್.ಡಿ.ದೀಪಕ್, ಲೀಲಾಕುಮಾರ್, ಹಾಗೂ ಗಿರೀಗೌಡ, ಸಿ.ರಾಮಚಂದ್ರಯ್ಯ, ಕೆ.ಪಿ.ಎಸ್.ಪ್ರಮೋದ್, ಎಚ್.ಪಿ.ಕಿರಣ್, ಪಿ.ಆರ್.ನಾಗೇಂದ್ರ, ಸಿ.ಕೆ.ಪದ್ಮನಾಭ್, ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ. ಮದನಗೌಡ, ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಜೆ.ಆರ್.ಕೆಂಚೇಗೌಡ, ಎಪಿಎಂಸಿ ಮಾಜಿ ನಿರ್ದೇಶಕ ಗೌಡಗೆರೆ ಪ್ರಕಾಶ್, ಬಿದರಿಕೆರೆ ಜಯರಾಂ, ಕಟ್ಟಾಯ ಶಿವಕುಮಾರ್, ವಿಷ್ಣು ಸೇನೆ ಜಿಲ್ಲಾಧ್ಯಕ್ಷ ಮಹಂತೇಶ್, ಕುಮಾರ್ ಇತರರಿದ್ದರು.
ಅರಳೇಪೇಟೆ ರಸ್ತೆ ನಿವಾಸಿಗಳಿಂದ ಅನ್ನದಾನ
ನಗರದ ಪೆಂಡಾಲ್ ಗಣಪತಿ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ನಗರದ ಅರಳೇಪೇಟೆ ರಸ್ತೆ ನಿವಾಸಿಗಳು ಪ್ರಸಾದ ರೂಪದಲ್ಲಿ ಸಾವಿರಾರು ಜನರಿಗೆ ಅನ್ನದಾನ ಮಾಡಿದರು. ಈ ವೇಳೆ ಟೈಲರ್ ಅಂಗಡಿ ಮಾಲೀಕ ವೆಂಕಟೇಶ್ ಮಾತನಾಡಿ, 2017 ರಿಂದ ನಿರಂತರವಾಗಿ ನಗರದ ಸ್ಥಳೀಯ ನಿವಾಸಿಗಳು ಸೇರಿ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತಿದೆ. ಸುಮಾರು 3 ಸಾವಿರ ಜನರು ಪ್ರಸಾದ ಸ್ವೀಕರಿಸಿದ್ದು, ನಾಡಿನ ಜನತೆಗೆ ಒಳ್ಳೆಯದು ಮಾಡಲಿ ಎಂದು ಗಣೇಶನನ್ನು ಪ್ರಾರ್ಥಿಸಲಾಗಿದೆ. ಮುಂದಿನ ವರ್ಷದಲ್ಲಿ ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ಸಹ್ಯಾದ್ರಿ ವೃತ್ತದ ಬಳಿ ಕಾರು ಚಾಲಕರು ಮತ್ತು ಟೆಂಪೋ ಮಾಲೀಕರು ಕೂಡ ಅನ್ನದಾನ ಮಾಡಿದರು. ನಾರಾಯಣಗೌಡ, ಸಯ್ಯದ್ ಅಕ್ಮಲ್, ಸ್ಥಳೀಯರಾದ ಚಂದ್ರಶೇಖರ್, ನಾರಾಯಣ್ ಭಗವಾನ್, ಮದನ್‌ಕೀರ್ತಿ, ಕುಮಾರ್, ಕೀರ್ತಿ, ವೀಣಾ ನಟರಾಜು, ಬಿ.ಎನ್. ಪುಟ್ಟಮ್ಮ, ಲಕ್ಷ್ಮೀ, ಜ್ಯೋತಿ, ಜಯಂತಿ, ಮಂಜುನಾಥ್, ಮನು, ಶಂಕರ್ ರಾವ್, ಪ್ರವೀಣ್ ಇದ್ದರು.