

ರಾಮನಗರ
ಸಾಲ ನೀಡುವ ಸಂದರ್ಭದಲ್ಲಿ ಪಡೆದಿದ್ದ ಆಸ್ತಿಯ ದಾಖಲೆ ಪತ್ರಗಳನ್ನು ಮರಳಿಸದ ಕಾರಣ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಖಾಸಗಿ ವಿಮಾ ಕಂಪನಿಗೆ ಒಂದು ಲಕ್ಷ ರೂ., ದಂಡ ವಿಧಿಸಿ ತೀರ್ಪು ನೀಡಿದೆ.
ದೂರುದಾರರಿಗೆ ದಂಡ ರೂಪದಲ್ಲಿ ಒಂದು ಲಕ್ಷ ರೂ. ನೀಡಬೇಕು. 10 ಸಾವಿರ ರೂ. ಪ್ರಕರಣದ ವೆಚ್ಚ ಭರಿಸಬೇಕು. 45 ದಿನದೊಳಗೆ ಒಂದು ಲಕ್ಷ ರೂ. ದಂಡ ನೀಡಲು ವಿಲವಾದರೆ ಶೇ.9ಬಡ್ಡಿ ಸಮೇತ ಹಣ ನೀಡಬೇಕು ಹಾಗೂ ಮೂಲ ದಾಖಲೆ ಕಳೆದು ಹೋಗಿರುವ ಬಗ್ಗೆ ದೂರುದಾರರಿಗೆ ಪ್ರಮಾಣಪತ್ರ ಕೊಡಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.
ಚನ್ನಪಟ್ಟಣದ ಬಿ. ಶ್ರೀನಿವಾಸ ಮೂರ್ತಿ ಎಂಬುವರು ವಿಮಾ ಕಂಪನಿ ಉದ್ಯೋಗಿಯಾಗಿದ್ದು, 2018ರಲ್ಲಿ ನಿವೃತ್ತಿ ಹೊಂದಿದ್ದರು. ಸೇವೆಯಲ್ಲಿದ್ದಾಗ ಕಂಪನಿಯ ನಿಯಮದಂತೆ ಚನ್ನಪಟ್ಟಣದಲ್ಲಿದ್ದ ತಮ್ಮ ನಿವೇಶನದ ಆಸ್ತಿ ಪತ್ರವನ್ನು ಕಂಪನಿಗೆ ಮಾರ್ಟಗೇಜ್ ಮಾಡಿ ಗೃಹ ನಿರ್ಮಾಣ ಸಾಲ ಪಡೆದುಕೊಂಡಿದ್ದರು. ನಿವೃತ್ತಿ ಸಮಯದಲ್ಲಿ ಬಾಕಿ ಉಳಿದಿದ್ದ ಸಾಲದ ಮೊತ್ತ 1.82 ಲಕ್ಷ ರೂ.ಗಳನ್ನೂ ಮರುಪಾವತಿ ಮಾಡಿದ್ದರು.
ಸಾಲವನ್ನು ಪೂರ್ಣ ಮರುಪಾವತಿ ಮಾಡಿದರೂ ವಿಮಾ ಕಂಪನಿ ಶ್ರೀನಿವಾಸಮೂರ್ತಿ ಅವರಿಗೆ ನಿವೇಶನದ ಮೂಲ ಆಸ್ತಿ ಪತ್ರ ನೀಡಲಿಲ್ಲ. ಈ ಸಂಬಂಧ ಅವರು ಪತ್ರ ವ್ಯವಹಾರ ಮಾಡಿದರೂ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಅವರು 2023ರ ಜನವರಿಯಲ್ಲಿ ಲೀಗಲ್ ನೋಟಿಸ್ ಕಳುಹಿಸಿದ್ದರು. ನೋಟಿಸ್‌ಗೂ ಕಂಪನಿ ಉತ್ತರಿಸದಿದ್ದಾಗ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಎಚ್.ಚನ್ನೇಗೌಡ ಸದಸ್ಯರಾದ ರೇಣುಕಾದೇವಿ ದೇಶಪಾಂಡೆ ಮತ್ತು ಟಿ.ತಮ್ಮಣ್ಣ ಅವರು, ಖಾಸಗಿ ವಿಮಾ ಕಂಪನಿ ಒಂದು ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ದೂರುದಾರ ಗ್ರಾಹಕರಿಗೆ ನೀಡಬೇಕು, ಜತೆಗೆ 10 ಸಾವಿರ ರೂ. ಪ್ರಕರಣದ ವೆಚ್ಚವನ್ನು ಭರಿಸಬೇಕು ಎಂದು ಆದೇಶ ನೀಡಿದ್ದಾರೆ.