

ಕಾಸರಗೋಡು: ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ ಆರ್‌ಸಿ ಮಾಲೀಕಗೆ 30 ಸಾವಿರ ರೂ.ದಂಡದ ಜತೆಗೆ ಕ್ರಿಮಿನಲ್ ಮೊಕದ್ದಮೆ ಹೂಡುವ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದರಿಂದ ಕೇರಳದಲ್ಲಿ ಅಪಘಾತ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ವಾಹನ ಚಲಾಯಿಸುವವರ ಪತ್ತೆಗಾಗಿ ಪೊಲೀಸ್ ನಿಗಾ ಹೆಚ್ಚಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ದ್ವಿಚಕ್ರ ವಾಹನ ಚಲಾವಣೆ ಗೀಳು ಹೆಚ್ಚುತ್ತಿದ್ದು, ಇದು ಅಪಘಾತ ಹೆಚ್ಚಲು ಕಾರಣವಾಗುತ್ತಿರುವುದನ್ನು ಮನಗಂಡು ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.