ಕಾಸರಗೋಡು: ನಾಡದೋಣಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಸಂದರ್ಭ ಯಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಸಮುದ್ರ ಮಧ್ಯೆ ಸಿಲುಕಿದ್ದ 19 ಮೀನುಗಾರರನ್ನು ಕಾಸರಗೋಡು ಮೆರೈನ್ ಎನ್‌ಫೋರ್ಸ್‌ಮೆಂಟ್ ತಂಡ ರಕ್ಷಿಸಿದೆ.
ಚೆರ್ವತ್ತೂರು ಅಳಿವೆ ಮೂಲಕ 19 ಮೀನುಗಾರರ ತಂಡ ಮೀನುಗಾರಿಕೆಗೆ ತೆರಳಿದ್ದು, ಮಾಹೆಯಿಂದ ಹತ್ತು ಕಿ.ಮೀ ದೂರ ಸಂಚರಿಸಿದಾಗ ದೋಣಿಯ ಯಂತ್ರದಲ್ಲಿ ದೋಷ ಕಾಣಿಸಿಕೊಂಡಿದೆ. ಬಿರುಸಿನ ಮಳೆಯಾಗುತ್ತಿದ್ದ ಕಾರಣ ಮೀನುಗಾರರು ಕಾಸರಗೋಡಿನ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿದ್ದರು. ಮೆರೈನ್ ಇಲಾಖೆ ಸಹಾಯಕ ನಿರ್ದೇಶಕಿ ಪಿ.ವಿ.ಪ್ರೀತಾ ಅವರ ನಿರ್ದೇಶನದ ಮೇರೆಗೆ ಮೆರೈನ್ ರೆಸ್ಕೂೃ ಯೂನಿಟ್ ಬೋಟ್‌ನಲ್ಲಿ ತೆರಳಿ ದೋಣಿಯಲ್ಲಿ ಸಿಲುಕಿಕೊಂಡಿದ್ದ ಎಲ್ಲ 19 ಮಂದಿಯನ್ನು ರಕ್ಷಿಸಿ ದಡಕ್ಕೆ ತಲುಪಿಸಿದ್ದಾರೆ. ದೋಣಿಯನ್ನೂ ದಡ ತಲುಪಿಸಲಾಗಿದೆ.