

ಹಲಗೂರು: ಸಾರ್ವಜನಿಕರು ಓಡಾಡುವ ಸ್ಥಳ, ರಸ್ತೆಬದಿ ಹಾಗೂ ಚರಂಡಿಯಲ್ಲಿ ಕಸ ಬಿಸಾಡಿದರೆ 500ರಿಂದ 5000 ರೂ.ವರೆಗೂ ದಂಡ ವಿಧಿಸಲಾಗುತ್ತದೆ ಎಂದು ಹಲಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರುದ್ರಯ್ಯ ತಿಳಿಸಿದರು.
ಹಲಗೂರು ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸ್ವಚ್ಛತಾ ಆಂದೋಲನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನೆಯಿಂದ ಕಸ ಸಂಗ್ರಹಣೆ ಕಾರ್ಯಕ್ರಮ ಪ್ರಾರಂಭಿಸಿದ್ದು, ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ನಿಮ್ಮ ಮನೆ ಹಾಗೂ ಅಂಗಡಿಗಳ ಮುಂದೆ ಬರುವ ವಾಹನಕ್ಕೆ ಹಾಕುವಂತೆ ತಿಳಿಸಿದರು.
ಎಲ್ಲೆಂದರಲ್ಲಿ ಕಸ ಬಿಸಾಡುವುದು ಬೇಡ, ನಮ್ಮ ಗ್ರಾಮ ಸ್ವಚ್ಛವಾಗಿರಬೇಕು, ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಪರಿಸರ ಕಾಪಾಡಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಪ್ರಸ್ತುತ ಕೋವಿಡ್ ಸೋಂಕು ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಪ್ರತಿನಿತ್ಯ ಕೈ ತೊಳೆದು, ಕೆಮ್ಮುವಾಗ ಮತ್ತು ಸೀನುವಾಗ ಕರ ವಸ್ತ್ರವನ್ನು ಅಡ್ಡ ಇಟ್ಟುಕೊಳ್ಳುವಂತಹ ಮುಂಜಾಗ್ರತಾ ಕ್ರಮಗಳನ್ನು ವಹಿಸಿದರೆ ಕೋವಿಡ್ ಸೋಂಕು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಫಲಕಗಳನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು.
ಗ್ರಾಪಂ ಅಧ್ಯಕ್ಷೆ ರಕ್ಷಿತಾ, ಉಪಾಧ್ಯಕ್ಷೆ ಲತಾ, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಹಾಜರಿದ್ದರು.