ಅಪಘಾತದಲ್ಲಿ ಪಾದಚಾರಿ, ಬೈಕ್ ಸವಾರ ಸಾವು

Published on

ನಂಜನಗೂಡು: ತಾಲೂಕಿನ ತಾಂಡವಪುರ ಗ್ರಾಮದ ಬಳಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಹಾಗೂ ಬೈಕ್ ಸವಾರ ಇಬ್ಬರೂ ಮೃತಪಟ್ಟಿದ್ದಾರೆ. ಬೈಕ್‌ನ ಹಿಂಬದಿ ಕುಳಿತಿದ್ದ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ.


ತಾಂಡವಪುರ ಗ್ರಾಮದ ಬಿ.ಶಿವಣ್ಣ(40) ಹಾಗೂ ಬೈಕ್ ಸವಾರ ಚಾಮರಾಜನಗರದ ಗಾಳಿಪುರ ಗ್ರಾಮದ ಮಿಥುನ್(19) ಮೃತರು. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಚಾಮರಾಜನಗರ ತಾಲೂಕಿನ ಭೋಗಪುರ ಗ್ರಾಮದ ಅನಿಲ್ ಪಾಟೀಲ್(19) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಿವಿಎಸ್ ಕಾರ್ಖಾನೆಯಲ್ಲಿ ನೌಕರರಾಗಿರುವ ಮೃತ ಮಿಥುನ್ ಕೆಲಸ ಮುಗಿಸಿಕೊಂಡು ತನ್ನ ಸ್ನೇಹಿತ ಅನಿಲ್ ಪಾಟೀಲ್ ಜತೆಗೆ ಬೈಕ್‌ನಲ್ಲಿ ಚಾಮರಾಜನಗರಕ್ಕೆ ತೆರಳುತ್ತಿದ್ದರು. ತಾಲೂಕಿನ ತಾಂಡವಪುರ ಬಳಿ ಮೈಸೂರು-ನಂಜನಗೂಡು ಚತುಷ್ಪಥ ಹೆದ್ದಾರಿಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಮನೆಗೆ ತೆರಳಲು ಹೆದ್ದಾರಿ ದಾಟುತ್ತಿದ್ದ ಬಿ.ಶಿವಣ್ಣ ಅವರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಶಿವಣ್ಣ ಹಾಗೂ ಬೈಕ್ ಸವಾರ ಮಿಥುನ್ ಸ್ಥಳದಲ್ಲೇ ಮೃತಪಟ್ಟರು. ಬೈಕ್ ಹಿಂಬದಿ ಕುಳಿತಿದ್ದ ಅನಿಲ್ ಪಾಟೀಲ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.


ಘಟನಾ ಸ್ಥಳಕ್ಕೆ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದರಾಜು ಭೇಟಿ ನೀಡಿ ಪರಿಶೀಲಿಸಿದರು. ಮೃತ ದೇಹಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net