ಸೆಸ್ಕ್ ಕಚೇರಿಗೆ ರೈತರ ಮುತ್ತಿಗೆ

SRP_09-02jpj
Published on

ಶ್ರೀರಂಗಪಟ್ಟಣ: ಗ್ರಾಮೀಣ ಭಾಗದಲ್ಲಿ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯ ಖಂಡಿಸಿ ತಾಲೂಕಿನ ಮಲ್ಲೇಗೌಡನಕೊಪ್ಪಲು ಗ್ರಾಮಸ್ಥರು ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಪಟ್ಟಣದ ಸೆಸ್ಕ್ ಕಚೇರಿಗೆ ಸೋಮವಾರ ಬೆಳಗ್ಗೆ ಆಗಮಿಸಿದ ಹಲವು ರೈತರು ಸುಮಾರು 1 ತಾಸು ಅಧಿಕಾರಿಗಳಿಗಾಗಿ ಕಾದು ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.


ಜನರ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಎಇಇ ಮಂಜುನಾಥ್ ಪ್ರಸಾದ್ ಹಾಗೂ ಜೆಇ ಪ್ರದೀಪ್ ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿದರು. ಈ ವೇಳೆ ಅಧಿಕಾರಿಗಳನ್ನು ಸುತ್ತುವರಿದ ಗ್ರಾಮಸ್ಥರು, ಸರ್ಕಾರದ ನಿಯಮದಂತೆ 7 ತಾಸು ವಿದ್ಯುತ್ ಬದಲಿಗೆ ಕೇವಲ 1.5 ತಾಸು ವಿದ್ಯುತ್ ನೀಡಿ ಕೃಷಿಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದೀರಾ, ಒಂದು ವಾರದಿಂದ ಸರಿಯಾಗಿ ವಿದ್ಯುತ್ ಸಿಗದ ಕಾರಣ ಕೃಷಿ ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳು, ಹೂವು ಮತ್ತು ತರಕಾರಿ ಗಿಡಗಳು ನೀರಿಲ್ಲದೆ ಒಣಗಿ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಏರುದನಿಯಲ್ಲಿ ಪ್ರಶ್ನಿಸಿ ಸಮಸ್ಯೆಗೆ ತಕ್ಷಣ ಪರಿಹಾರ ನೀಡಿ ಎಂದು ವಾಗ್ವಾದ ನಡೆಸಿದರು.


ಉದ್ರಿಕ್ತ ಗ್ರಾಮಸ್ಥರನ್ನು ಸಂತೈಸಿ ಸಮಾಧಾನಪಡಿಸಿದ ಎಇಇ ಮಂಜುನಾಥ್ ಪ್ರಸಾದ್ ಮಾತನಾಡಿ, ಸೆಸ್ಕ್ ಉದ್ದೇಶಪೂರ್ವಕವಾಗಿ ವಿದ್ಯುತ್ ವ್ಯತ್ಯಯ ಮಾಡುತ್ತಿಲ್ಲ, ಮಳೆಯ ಅಭಾವ, ವಿದ್ಯುತ್ ಉತ್ಪಾದನೆ ಕೊರತೆ ಹಾಗೂ ಹೆಚ್ಚು ಬಿಸಿಲಿನ ತಾಪಮಾನದಿಂದ ಅಧಿಕ ಬಳಕೆಯಾಗುತ್ತಿರುವ ವಿದ್ಯುತ್ ಪೂರೈಕೆಗೆ ಸ್ವಲ್ಪ ತೊಡಕುಂಟಾಗಿದ್ದು, ತಾಲೂಕು ವ್ಯಾಪ್ತಿಯಲ್ಲಿ ಲಭ್ಯವಿರುವ ವಿದ್ಯುತ್ ಅನ್ನು ಎಲ್ಲ ಕಡೆಗೂ ಹಂಚಿಕೆ ಮಾಡಲಾಗುತ್ತಿದೆ. ಸರ್ಕಾರವೂ ಈ ನಿಟ್ಟಿನಲ್ಲಿ ಹೆಚ್ಚು ಪೂರೈಕೆಗೆ ಸಹಕಾರ ನೀಡಿದೆ. ಹೀಗಾಗಿ, ಬೆಳಗ್ಗೆ 3, ರಾತ್ರಿ 4 ಗಂಟೆಗಳ ನಿಯಮದಂತೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.


ಗ್ರಾಮದ ಮುಖಂಡರಾದ ಶಂಕರೇಗೌಡ, ಚೆಲುವೇಗೌಡ, ನಯನ್‌ಕುಮಾರ್, ಕಾಳೇಗೌಡ, ಸುರೇಶ್,ಚನ್ನೇಗೌಡ, ಮಾಯಿ, ಆನಂದ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net