ತಿ.ನರಸೀಪುರ ತಾಲೂಕಿನಲ್ಲಿ ಶಾಂತಿಯುತ ಮತದಾನ

IMG_20240426_130229720_HDR
Published on

ತಿ.ನರಸೀಪುರ: ತಾಲೂಕಿನಾದ್ಯಂತ ಶುಕ್ರವಾರ ಲೋಕಸಭೆಗೆ ಶಾಂತಿಯುತ ಮತದಾನ ನಡೆಯಿತು. ಬಹುತೇಕ ತಾಲೂಕಿನ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆರಂಭವಾದರೆ ಕೆಲ ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಮತದಾನ ಚುರುಕುಗೊಂಡಿತು. ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು.


85 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಹೆಚ್ಚಾಗಿ ವೃದ್ಧರು ಮತಗಟ್ಟೆ ಬಳಿ ಕಂಡು ಬರಲಿಲ್ಲ. ಅಂಗವಿಕಲರು, ಮಹಿಳೆಯರು, ಯುವತಿಯರು ಮತದಾನ ಮಾಡಿದರು. ಸೂರ್ಯನ ತಾಪ ಕಡಿಮೆಯಾಗುತ್ತಿದ್ದಂತೆ ಮನೆಗಳಿಂದ ಗುಂಪು ಗುಂಪಾಗಿ ಹೊರಬಂದ ಮತದಾರರು ಕುಟುಂಬ ಸಮೇತ ಹಕ್ಕು ಚಲಾಯಿಸಿದರು. ಮಧ್ಯಾಹ್ನ 2 ಗಂಟೆಯ ವೇಳೆಗೆ ಶೇ.40 ಮತದಾನವಾಗಿತ್ತು.


ತಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಗೂರು, ಸೋಸಲೆ, ಕಸಬಾ, ಬನ್ನೂರು ಹಾಗೂ ತಲಕಾಡು ಹೋಬಳಿಯಲ್ಲಿ ಜನತೆ ಮತದಾನಕ್ಕೆ ಹೆಚ್ಚಿನ ಆಸಕ್ತಿ ತೋರಿಸಿದ್ದು ಕಂಡು ಬಂತು. ಮತಗಟ್ಟೆ ಸಮೀಪ ಆಯಾಯ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.


ತಾಲೂಕಿನ ಕಗ್ಗಲೀಪುರ, ಕೇತುಪುರ, ನಿಲಸೋಗೆ, ಮೂಗೂರು, ಆಲಗೂಡು, ಹೆಳವರಹುಂಡಿ, ಹುಣಸೂರು, ಚನ್ನ ಬಸವಯ್ಯನಹುಂಡಿ, ಚೌಹಳ್ಳಿ, ಮಾದಾಪುರ, ಹೆಮ್ಮಿಗೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಗಟ್ಟೆಯ ಬಳಿ ಕಾರ್ಯಕರ್ತರು ತಮ್ಮ ಪಕ್ಷದ ಪರ ಮತಯಾಚನೆಯಲ್ಲಿ ತೊಡಗಿದ್ದರು. ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್ ಪತ್ನಿಯೊಂದಿಗೆ ತಾಲೂಕಿನ ತುಂಬಲ ಗ್ರಾಮದಲ್ಲಿ ಮತ ಚಲಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net