ದಂಡ ಪಾವತಿಗೆ ಮೀನಾಮೇಷ!, ನಿರ್ಲಕ್ಷಿಸಿದರೆ ಕ್ರಿಮಿನಲ್ ದಾವೆ

Musturu Gramapanchayat
ಮುಸ್ಟೂರು ಗ್ರಾಪಂ ಕಚೇರಿ ಹೊರನೋಟ.
Published on

ಸಿದ್ದಾಪುರ: ಗಾಯರಾಣ ಭೂಮಿಯಲ್ಲಿ ಸಾರ್ವಜನಿಕರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಅನುಮತಿ ನೀಡಿದ ಕಾರಣಕ್ಕೆ ಪಿಡಿಒಗಳಿಂದ ದಂಡ ವಸೂಲಾತಿಗೆ ಸಂಬಂಧಪಟ್ಟ ನಿಗಮದ ಅಧಿಕಾರಿಗಳು ಸೂಚಿಸಿದರೂ ದಂಡ ಪಾವತಿಗೆ ಮಾತ್ರ ಪಿಡಿಒಗಳು ಮೀನಾಮೇಷ ಎಣಿಸುತ್ತಿದ್ದಾರೆ.

ಸಮೀಪದ ಮುಸ್ಟೂರು ಗ್ರಾಪಂ ವ್ಯಾಪ್ತಿಯ ಗಾಯರಾಣ ಪ್ರದೇಶದ ಸರ್ವೇ ನಂ. 210/1 ರಲ್ಲಿ ಬಸವ ವಸತಿ ಯೋಜನೆ ಹಾಗೂ ಬಸವ ವಸತಿ ಯೋಜನೆ(ಹೆಚ್ಚುವರಿ)ಯಡಿ 2016-17 ಹಾಗೂ 2017-18ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಅಂದಿನ ಪಿಡಿಒಗಳು ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸರ್ಕಾರಿ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಂದ ವಸತಿ ಯೋಜನೆಯಡಿ ನಿವಾಸ ನಿರ್ಮಾಣಕ್ಕೆ ಪಡೆದ ಅನುದಾನ ಹಿಂಪಡೆಯುವಂತೆ ಬೆಂಗಳೂರಿನ ರಾಜೀವ್‌ಗಾಂಧಿ ರೂರಲ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಕಾರಟಗಿ ತಾಪಂಗೆ ಸೂಚನೆ ನೀಡಿದ್ದರು.

ಒಂದು ವೇಳೆ ಮನೆ ನಿರ್ಮಾಣ ಮಾಡಿಕೊಂಡ ಫಲಾನುಭವಿಗಳು ಸರ್ಕಾರದ ಅನುದಾನ ಹಿಂತಿರುಗಿಸದಿದ್ದರೆ, ಜನರಿಗೆ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದ ಮುಸ್ಟೂರು ಗ್ರಾಪಂ ಪಿಡಿಒಗಳಿಂದ ಶೇ.11ರ ಬಡ್ಡಿ ದರದಲ್ಲಿ ದಂಡ ವಸೂಲಾತಿಗೆ ಸೂಚಿಸಲಾಗಿತ್ತು.

ಇದಕ್ಕೆ ಮನ್ನಣೆ ನೀಡದಿದ್ದರೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಹಾಗೂ ಸಿವಿಲ್ ದಾವೆ ಹೂಡುವಂತೆ ಕಾರಟಗಿ ತಾಪಂ ಇಒಗೆ ಸೂಚಿಸಿದ್ದರು. ಆದರೂ, ಪಿಡಿಒಗಳು ಈವರೆಗೆ ಸರ್ಕಾರಕ್ಕೆ ದಂಡ ಪಾವತಿ ಮಾಡದೆ ನಿರ್ಲಕ್ಷಿಸಿದ್ದಾರೆ.

ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು

ಮುಸ್ಟೂರು ಗ್ರಾಪಂನಲ್ಲಿ 2016-17 ಹಾಗೂ 2017-18ರಲ್ಲಿ ಕಾರ್ಯನಿರ್ವಹಿಸಿರುವ ಪಿಡಿಒಗಳಿಗೆ ದಂಡ ಪಾವತಿಸುವಂತೆ ಕಾರಟಗಿ ತಾಪಂ ಇಒ ಈವರೆಗೆ ಎರಡು ನೋಟಿಸ್ ನೀಡಿದ್ದಾರೆ. ಆದರೂ, ಈವರೆಗೆ ಪಿಡಿಒಗಳು ಇದನ್ನು ಗಂಭೀರವಾಗಿ ಪರಿಗಣಿಸುವ ಬದಲು ಈ ಬಗ್ಗೆ ತಲೆ ಸಹ ಕೆಡಿಸಿಕೊಂಡಿಲ್ಲ.

ಪಾವತಿಸಬೇಕಾದ ಮೊತ್ತ ಎಷ್ಟು?

ಕಾನೂನು ಬಾಹಿರವಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ಬಸವ ವಸತಿ ಯೋಜನೆಯಡಿ 2016-17ರಲ್ಲಿ ಹನುಮಂತಪ್ಪ 37,299 ರೂ., ಪ್ರಕಾಶ್ ಹಿರೇಮಠ 37,500 ರೂ., 2016-17 ಹಾಗೂ 2017-18ರಲ್ಲಿ ಹೆಚ್ಚುವರಿ ಬಸವ ವಸತಿ ಯೋಜನೆಯಡಿ ಅನುಮತಿ ನೀಡಿದ ಪಿಡಿಒ ರಾಮಕೃಷ್ಣ ದೇಸಾಯಿ 37,299, 37,299, 27,799, 30,000 ಸಾವಿರ ರೂ. ಸೇರಿ ಒಟ್ಟು 1,34,400 ರೂ. ದಂಡ ಪಾವತಿಸಬೇಕಿದೆ.

ಕಾಲಾವಕಾಶಕ್ಕೆ ನೀಡುವಂತೆ ಮನವಿ

ತಪ್ಪು ಮಾಡಿರುವ ಮೂವರು ಪಿಡಿಒಗಳ ಪೈಕಿ ರಾಮಕೃಷ್ಣ ದೇಸಾಯಿ ಒಟ್ಟು 1,34,000 ರೂ. ದಂಡ ಪಾವತಿಸಬೇಕಿತ್ತು. ಈ ಪೈಕಿ 75 ಸಾವಿರ ರೂ. ದಂಡವನ್ನು 2023 ಸೆ.13 ರಂದು ಪಾವತಿ ಮಾಡಿದ್ದಾರೆ. ಉಳಿದ 59,000 ರೂ. ದಂಡ ಪಾವತಿಗೆ ಕಾಲಾವಕಾಶ ಕೇಳಿದ್ದಾರೆ ಎಂದು ತಾಪಂ ಇಒ ನರಸಪ್ಪ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಸರ್ಕಾರಿ ಗಾಯರಾಣ ಪ್ರದೇಶದ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಕಾನೂನಿನಡಿ ಅವಕಾಶವಿಲ್ಲ. ಆದರೆ, ಮುಸ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ 2016-17 ಹಾಗೂ 2017-18ರಲ್ಲಿ ಸರ್ಕಾರಿ ಅನುದಾನ ಪಡೆದು ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಮುಂದಿನ ನೋಟೀಸ್‌ಗೂ ಮನ್ನಣೆ ನೀಡದಿದ್ದರೆ ಕೋರ್ಟ್‌ನಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ದಾವೆ ಹೂಡಲಾಗುವುದು.| ನರಸಪ್ಪ, ತಾಪಂ ಇಒ, ಕಾರಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net