ತಿಂಗಳಾಂತ್ಯಕ್ಕೆ ನಿವೇಶನ ಶುಲ್ಕ ಪಾವತಿಸಿ

Published on

ರಾಮನಗರ: ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆ ನಿವೇಶನದಾರರು ಜೂನ್​ 30ರೊಳಗೆ ಅಭಿವೃದ್ಧಿ ಶುಲ್ಕ ಪಾವತಿಸಿದರೆ ಬಡಾವಣೆಗಳನ್ನು ವೇಗವಾಗಿ ಅಭಿವೃದ್ಧಿ ಮಾಡಬಹುದು ಎಂದು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್​ ಕುಮಾರ್​ ತಿಳಿಸಿದರು.

ರಾಮನಗರದ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ 1661 ನಿವೇಶನದಾರರ ಪೈಕಿ 491 ಮಂದಿ ಮಾತ್ರ ಇದುವರೆಗೆ ಅಭಿವೃದ್ಧಿ ಶುಲ್ಕ ಪಾವತಿಸಿದ್ದು, ಉಳಿದ ನಿವೇಶನದಾರರು ಒಂದು ತಿಂಗಳ ಕಾಲಮಿತಿಯಲ್ಲಿ ಶುಲ್ಕ ಪಾವತಿಸಬೇಕು. ಇದರಿಂದ ಬಡಾವಣೆಗಳನ್ನು ವೇಗವಾಗಿ ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದರು.

ಕಾನೂನಾತ್ಮ ಸಮಸ್ಯೆಯಲ್ಲಿ ಸಿಲುಕಿದ್ದ ಪ್ರಾಧಿಕಾರದ ಅರ್ಚಕರಹಳ್ಳಿ ಹೆಲ್ತ್​ ಸಿಟಿ, ಜೀಗೇನಹಳ್ಳಿ, ಚನ್ನಪಟ್ಟಣ ಕಣ್ವ ಬಡಾವಣೆಗಳಲ್ಲಿ ಹಂಚಿಕೆ ಮತ್ತು ಹರಾಜು ಮೂಲಕ ನಿವೇಶನ ಪಡೆದವರಿಂದ ಚದರ ಅಡಿಗೆ 200 ರೂ. ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡು ನಿವೇಶನ ಶುದ್ಧಕ್ರಯ ಪತ್ರ ಹಾಗೂ ಖಾತೆಗಳನ್ನು ವಿತರಿಸುವಂತೆ ಸಚಿವ ಸಂಪುಟದಲ್ಲಿ ರ್ನಿಣಯ ತೆಗೆದುಕೊಳ್ಳಲಾಗಿತ್ತು. ಅದರಂತೆ 491 ಮಂದಿ ಅಭಿವೃದ್ಧಿ ಶುಲ್ಕ ಪಾವತಿ ಮಾಡಿದ್ದಾರೆ ಎಂದರು.

ಈವರೆಗೆ 11 ಕೋಟಿ ರೂ. ಪ್ರಾಧಿಕಾರಕ್ಕೆ ಸಂಗ್ರಹವಾಗಿದೆ. ಆ ಬಡಾವಣೆಗಳ ಸಂಗ್ರಹವಾದ ಹಣವನ್ನು ಅದೇ ಬಡಾವಣೆಗೆ ಅಭಿವೃದ್ಧಿಗೆ ಖರ್ಚು ಮಾಡಲು ಸರ್ಕಾರದ ಆದೇಶವಿದೆ. ಅದರಂತೆ ಪ್ರಾಧಿಕಾರ ಮೂಲ ಸೌಕರ್ಯ ಒದಗಿಸಲು ಸಿದ್ಧವಿದೆ. ಬಡಾವಣೆ ಆಮೂಲಾಗ್ರ ಅಭಿವೃದ್ಧಿಗೆ 80 ಕೋಟಿ ರೂ. ಗೂ ಅಧಿಕ ಅನುದಾನ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಉಳಿದ ನಿವೇಶನದಾರರು, ಜೂನ್​ ತಿಂಗಳೊಳಗೆ ಅಭಿವೃದ್ಧಿ ಶುಲ್ಕ ಪಾವತಿಸಿದರೆ, ಬಡಾವಣೆಗಳನ್ನು ವೇಗವಾಗಿ ಅಭಿವೃದ್ಧಿ ಮಾಡಬಹುದು. ನಿವೇಶನದಾರರ ಸಹಕಾರ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net