ನೆರೆ ರಾಜ್ಯಗಳ ಮಾದರಿಯಲ್ಲೇ ವೇತನ ನೀಡಿ

19-07-rama-bisioota
Published on

ಬಿಸಿಯೂಟ ನೌಕರರ ಸಂಘಟನೆಯ ರಾಜ್ಯ ಅಧ್ಯಕ್ಷ ಹೊನ್ನಪ್ಪ ಮರೆಯಮ್ಮನವರ್ ಆಗ್ರಹ | ನಗರದಲ್ಲಿ ಪ್ರತಿಭಟನೆ

ರಾಮನಗರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಮನಗರ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜೂನಿಯರ್ ಕಾಲೇಜು ಆಟದ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಸಿಯೂಟ ತಯಾರಕರು, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಅಧ್ಯಕ್ಷ ಹೊನ್ನಪ್ಪ ಮರೆಯಮ್ಮನವರ್, ಎರಡೂ ದಶಕಕ್ಕೂ ಹೆಚ್ಚು ಕಾಲದಿಂದ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಮಹತ್ವದ ಕೆಲಸವನ್ನು ಮಾಡುವ ಮೂಲಕ ಸರ್ಕಾರದ ಯೋಜನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಪ್ರತಿ ತಿಂಗಳು ಸಂಬಳಕ್ಕೆ ಬದಲಾಗಿ ಕನಿಷ್ಠ ಗೌರವ `ಧನಕ್ಕೆ ಕೆಲಸ ಮಾಡುತ್ತಿದ್ದಾರೆ. ಇದು ಜೀವನ ನಿರ್ವಹಣೆಗೆ ಸಾಲದಾಗಿದೆ. ಅನ್ಯ ಉದ್ಯೋಗವನ್ನು ಹುಡುಕಿಕೊಳ್ಳಲು ಸಾಧ್ಯವಾಗದೆ ಇರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದು, ಕಷ್ಟದಲ್ಲಿಯೇ ಜೀವನ ನಡೆಸುವಂತೆ ಆಗಿದೆ ಎಂದರು.

ರಾಜ್ಯದಲ್ಲಿ ಒಟ್ಟು 1.20 ಲಕ್ಷ ಮಂದಿ ಬಿಸಿಯೂಟ ತಯಾರಕರು ಇದ್ದು, ವೇತನ ಹೆಚ್ಚಳದ ನಮ್ಮ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಒಂದು ಸಾವಿರ ಏರಿಕೆ ಮಾಡಿದ್ದು ಬಿಟ್ಟರೆ ನೆಮ್ಮದಿಯ ಜೀವನ ನಡೆಸಲು ಬೇಕಾದ ನೆರವು ನೀಡುವಲ್ಲಿ ವಿಫಲವಾಗಿದೆ ಎಂದರು.

ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣದಲ್ಲಿ ಈಗಾಗಲೇ ಅಲ್ಲಿನ ಬಿಸಿ ಊಟ ನೌಕರರಿಗೆ 31 ಸಾವಿರ ವೇತನ ನೀಡಲಾಗುತ್ತಿದ್ದು, ನಮಗೂ ಇದೇ ಮಾದರಿಯಲ್ಲಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಎಸ್‌ಡಿಎಂಸಿ ರಾಜ್ಯ ಉಪಾಧ್ಯಕ್ಷ ಎನ್.ಎಂ.ಶಂಭೂಗೌಡ ಮಾತನಾಡಿ, ಸರ್ಕಾರದ ಬಿಸಿಯೂಟ ಯೋಜನೆ ಯಶಸ್ವಿ ಆಗಬೇಕಾದರೆ ಬಿಸಿಯೂಟ ತಯಾರಕರ ಪಾತ್ರ ಮಹತ್ವದಾಗಿದೆ. ಆದರೆ ಇವರ ನಿವೃತ್ತಿ ನಂತರ ಬದುಕು ದುಸ್ತರವಾಗಿದ್ದು, ಸರ್ಕಾರ ಶೀಘ್ರವೇ ಈಗಾಗಲೇ ನಿವೃತ್ತಿ ಹೊಂದಿರುವ ಬಿಸಿಯೂಟ ತಯಾರಕರಿಗೆ 3 ಲಕ್ಷ ರೂ. ಇಡುಗಂಟು ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ನಿವೃತ್ತರಾಗಿರುವ ನೌಕರರಿಗೂ ಇದನ್ನು ಜಾರಿಗೆ ತರಬೇಕು ಜೊತೆಗೆ ಮಾಸಿಕ ಪಿಂಚಣಿ ರೂಪದಲ್ಲಿ 5 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿದರು,

ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಪನಾ ಯಾದಗಿರಿ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಎಚ್.ನಿರ್ಮಲಾ, ಪ್ರಾಂತ ರೈತ ಸಂಘ ರಾಜ್ಯ ಸಹ ಕಾರ್ಯದರ್ಶಿ ಪ್ರಭಾ, ಮುಖಂಡರಾದ ಶ್ರೀನಿವಾಸ್, ರೋಸ್ ಮೇರಿ, ಶಶಿಕಲಾ, ಮಂಗಳಮ್ಮ, `ಭಾರತಿ ಸುನೀತ, ಸಿದ್ದರಾಜು, ಗಂಗಾಧರ್ ಸುಣ್ಣಘಟ್ಟ ಅನಸೂಯಮ್ಮ, ಶಾಂತಮ್ಮ, ಸಾಕಮ್ಮ ಮುಂತಾದವರು ಇದ್ದರು.

ಬೇಡಿಕೆಗಳು:

1. ವಯೋನಿವೃತ್ತಿ ಹೊಂದಿದ ಬಿಸಿಯೂಟ ತಯಾರಕರಿಗೆ 3 ಲಕ್ಷ ರೂ. ಇಡಗಂಟು ಮತ್ತು ಮಾಸಿಕ 5 ಸಾವಿರ ಪಿಂಚಣಿ ನೀಡಬೇಕು.

2. ಬಿಸಿಯೂಟ ತಯಾರಕರಿಗೆ 2 ಲಕ್ಷ ರೂ. ಅಪಘಾತ ಪರಿಹಾರ ಒದಗಿಸಬೇಕು.

3. ಬಿಸಿಯೂಟ ತಯಾರಿಕೆ ಯೋಜನೆಯನ್ನು ಖಾಸಗಿಯವರಿಗೆ ನೀಡುವ ಯಾವುದೇ ಪ್ರಯತ್ನಕ್ಕೆ ತಡೆ ಹಾಕಬೇಕು, ಇರುವ ಸಿಬ್ಬಂದಿಯನ್ನೇ ನೇಮಕ ಮಾಡಿಕೊಳ್ಳಬೇಕು.

4. ಬಿಸಿಯೂಟ ತಯಾರಕರಿಗೆ ವರ್ಷದ 12 ತಿಂಗಳವೂ ವೇತನ ನೀಡಬೇಕು. ಪ್ರತಿ ತಿಂಗಳ 5 ನೇ ತಾರೀಕಿನೊಳಗೆ ವೇತನ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net