

ಕುಶಾಲನಗರ: ಶಿರಂಗಾಲ ಗ್ರಾಮ ಪಂಚಾಯಿತಿಯ 2022-23ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಪಂಚಾಯಿತಿ ಅಧ್ಯಕ್ಷೆ ಲತಾಬಾಯಿ ಅಧ್ಯಕ್ಷತೆಯಲ್ಲಿ ನಡೆಯಿತು.
ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ.ಸಿ.ರವಿ, 2022-23ನೇ ಸಾಲಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಜಮಾ ಮತ್ತು ಖರ್ಚಿನ ಬಗ್ಗೆ ವರದಿ ಮಂಡಿಸಿದರು. ನಂತರ ಸಾರ್ವಜನಿಕರಿಂದ ಅನುಮೋದನೆ ಪಡೆಯಲಾಯಿತು.
ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕೆಂಬ ಒತ್ತಾಯ ಸಭೆಯಲ್ಲಿ ಕೇಳಿ ಬಂತು. ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ ಕೆಲಸವನ್ನು ತುರ್ತಾಗಿ ಮಾಡಿಸುವಂತೆಯೂ ಹಲವರು ಆಗ್ರಹಿಸಿದರು. ಸರ್ಕಾರದ ವಿವಿಧ ಯೋಜನೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಪಿಡಿಒ ಹೇಮಲತಾ ಮಾಹಿತಿ ನೀಡಿದರು.
ನೋಡಲ್ ಅಧಿಕಾರಿ ಮಂಜುನಾಥ ಶೆಟ್ಟಿ ಮಾತನಾಡಿ, ಸಾರ್ವಜನಿಕರು ಮನೆ ಮತ್ತು ನೀರು ಕಂದಾಯವನ್ನು ನಿಗದಿತ ಅವಧಿಯೊಳಗೆ ಪಾವತಿ ಮಾಡಿದಲ್ಲಿ ಮಾತ್ರ ಪಂಚಾಯಿತಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಸಾಧ್ಯ ಎಂದರು.
ಪಂಚಾಯಿತಿ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಶ್ರೀಕಾಂತ್, ಪ್ರದೀಪ, ಲಕ್ಷ್ಮೀ ಮತ್ತು ಸರಿತಾ ಉಪಸ್ಥಿತರಿದ್ದರು.