

ಗುಂಡ್ಲುಪೇಟೆ: ತಾಲೂಕಿನ ಗುರುವಿನಪುರ ಗ್ರಾಮದ ಸಮೀಪ ಕಾರ್ಯ ನಿರ್ವಹಿಸುತ್ತಿರುವ ಅರಿಶಿಣ ಸಂಸ್ಕರಣಾ ಘಟಕದ ಮಾಲೀಕರು ರೈತರಿಂದ ಅರಿಶಿಣ ಖರೀದಿಸಿದ ಹಣವನ್ನು ಕೂಡಲೇ ಪಾವತಿಸುವಂತೆ ಒತ್ತಾಯಿಸಿ ರಾಜ್ಯಅರಿಶಿಣ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಕಾರ್ಖಾನೆಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು.
ಒಕ್ಕೂಟದ ಸಂಚಾಲಕ ಎಸ್.ಎಂ.ನಾಗಾರ್ಜುನಕುಮಾರ್ ನೇತೃತ್ವದಲ್ಲಿ ಸಂಸ್ಕರಣಾ ಘಟಕಕ್ಕೆ ಮುತ್ತಿಗೆ ಹಾಕಿದ ರೈತರು ಘಟಕದ ಮಾಲೀಕರು ತಾವು ಖರೀದಿಸಿದ ಹಣವನ್ನು ರೈತರಿಗೆ ಪಾವತಿಸದೆ ಸತಾಯಿಸುತ್ತಿದ್ದಾರೆ. ಆದ್ದರಿಂದ 12 ಜನ ರೈತರಿಗೆ ಬಾಕಿಯುಳಿಸಿಕೊಂಡಿರುವ 8ಲಕ್ಷ ರೂಪಾಯಿಯನ್ನು ಕೂಡಲೇ ಪಾವತಿಸಬೇಕು ಎಂದು ಪಟ್ಟುಹಿಡಿದರು.
ಸ್ಥಳಕ್ಕೆ ಆಗಮಿಸಿದ ತೆರಕಣಾಂಬಿ ಪೊಲೀಸರು ಮಾಲೀಕರನ್ನು ಸಂಪರ್ಕಿಸಿ ಬಾಕಿ ಹಣ ಕೊಡಿಸುವ ಭರವಸೆ ನೀಡಿದರು. ನಾಳೆ ಹಣ ಪಾವತಿ ಮಾಡದಿದ್ದರೆ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ತೆರಳಿದರು.