

ಹಲಗೂರು: ಹಲಗೂರು ಮತ್ತು ವಳಗೆರೆ ದೊಡ್ಡಿ ಎರಡು ಗ್ರಾಮಗಳ ಆರಾಧ್ಯ ದೇವತೆಯಾದ ಶ್ರೀ ಪಟ್ಟಲದಮ್ಮನ ಜಾತ್ರಾ ಮಹೋತ್ಸವಕ್ಕೆ ಶನಿವಾರ ತೆರೆ ಬಿತ್ತು.
ಜಾತ್ರಾ ಮಹೋತ್ಸವ ಬುಧವಾರದಿಂದ ಪ್ರಾರಂಭಗೊಂಡು ನಾಲ್ಕು ದಿನಗಳ ಕಾಲ ವೈಭವವಾಗಿ ನಡೆಯಿತು. ಶನಿವಾರ ಬೆಳಗ್ಗಿನ ಜಾವ ಕೊಂಡೋತ್ಸವ ನೆರವೇರಿತು.
ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ದೇವಿಗೆ ಅಭಿಷೇಕ, ಶ್ರೀ ಸ್ತೋತ್ರ ಪಾರಾಯಣ, ದುರ್ಗ ಸ್ತೋತ್ರ ಪಾರಾಯಣಗಳೊಂದಿಗೆ ಮಹಾಮಂಗಳಾರತಿ ಮಾಡಿದ ನಂತರ ಮುತ್ತೈದೆಯರು ವಿಶೇಷ ಪೂಜೆ ಸಲ್ಲಿಸಿ ತಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ದೇವಸ್ಥಾನಕ್ಕೆ ಬಂದಿರುವ ಮುತ್ತೈದೆಯರು ಅರಿಶಿಣ, ಕುಂಕುಮ ವಿನಿಮಯ ಮಾಡಿಕೊಂಡು ಪಾನಕ, ಕೋಸಂಬರಿ ನೀಡಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿದರು.
ಶುಕ್ರವಾರ ಮಧ್ಯಾಹ್ನ ಹಲಗೂರು ಗ್ರಾಮದ ಕರಿಬೀದಿಯಲ್ಲಿರುವ ಕರಗದ ಮನೆಯಲ್ಲಿ ಪಟ್ಟಲದಮ್ಮನ ದೇವರ ಕರಗಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿದ ನಂತರ ಎಳವಾರ ಓಲೆ ಬಂಡಿ ಮತ್ತು ಹರಕೆ ಹೊತ್ತವರು ಪಾನಕ, ಮಜ್ಜಿಗೆಗಳನ್ನು ಮಾಡಿಕೊಂಡು ಪ್ರಮುಖ ಬೀದಿಗಳಲ್ಲಿ ಗೊಂಬೆ ಕುಣಿತ, ವೀರಗಾಸೆ ಕುಣಿತ, ಮರಗಾಲು ಕುಣಿತ ಹಾಗೂ ಕೇರಳದ ಚಂಡೇವಾದ್ಯಗಳನ್ನು ಬಾರಿಸುತ್ತಾ ಮೆರವಣಿಗೆ ಮುಖಾಂತರ ಗ್ರಾಮದ ಹೊರಭಾಗದಲ್ಲಿರುವ ದೇವಸ್ಥಾನಕ್ಕೆ ಹೋಗಿ ಕೊಂಡದ ಬಾಯಿಗೆ ಸೌದೆಗಳನ್ನು ಹಾಕಿದರು. ನಂತರ ಬಂದ ಭಕ್ತರಿಗೆ ಪಾನಕ, ಮಜ್ಜಿಗೆಯನ್ನು ನೀಡಿದರು.
ಅದೇ ದಿನ ರಾತ್ರಿ ದೇವರ ಕರಗವನ್ನು ಕರಗದ ಮನೆಯಿಂದ ತೆಗೆದುಕೊಂಡು ಬಂದು ಶ್ರೀ ವೀರಭದ್ರ ದೇವಸ್ಥಾನದ ಆವರಣದಲ್ಲಿ ಕರಗಕ್ಕೆ ಹಾಗೂ ಪಟ್ಟಲದಮ್ಮನ ಗಿಂಡಿಗೆ ಮಲ್ಲಿಗೆ, ಕನಕಾಂಬರ ಮತ್ತು ಹೊಂಬಾಳೆಯಿಂದ ಅಲಂಕರಿಸಲಾಯಿತು. ಕರಗವನ್ನು ಹೊತ್ತು ಮಡಿವಾಳ ಹಾಸುವ ಮಡಿಯ ಮೇಲೆ ಹೊರಟಾಗ ಜತೆಯಲ್ಲಿ ಕೊಂಡ ಹಾಯುವ ಅರ್ಚಕ ಕೃಷ್ಣಪ್ಪ ಪಟ್ಟಲದಮ್ಮನ ಗಿಂಡಿಯನ್ನು ಹೊತ್ತು, ಪೂಜೆ ಪುನಸ್ಕಾರಗಳ ನೇತೃತ್ವ ವಹಿಸಿದ ಪ್ರಸಾದ್ ಅಗೋರ ಹಾಗೂ ವಿದ್ಯಾಗಣಪತಿ ದೇವಸ್ಥಾನದ ಅರ್ಚಕರಾದ ನಾಗರಾಜು ಸೇರಿದಂತೆ ಅವರ ಶಿಷ್ಯಂದಿರು, ದೇವರ ಬಸವ ಹಾಗೂ ತಂಬಿಟ್ಟಿನ ಆರತಿ ಹೊತ್ತ ಮುತ್ತೈದೆಯರು ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ತೆರಳಿ, ಪೂಜೆ ಪುನಸ್ಕಾರಗಳು ನಡೆದ ನಂತರ ಶನಿವಾರ ಬೆಳಗ್ಗೆ 6 ಗಂಟೆ ನಂತರ ಕೊಂಡೋತ್ಸವ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.
ನಡುಕೇರಿ ವೀರಭದ್ರ ದೇವಸ್ಥಾನದಲ್ಲಿ ವೀರಭದ್ರಸ್ವಾಮಿ ಪ್ರಳಯ ರುದ್ರ ಅಲಂಕಾರದಿಂದ ಕಂಗೊಳಿಸುತ್ತಿದ್ದರೆ, ಪಟ್ಟಲದಮ್ಮನ ದೇವಿಗೆ ಕಪ್ಪು ದ್ರಾಕ್ಷಿ ಹಾಗೂ ಅನಾನಸ್ ಹಣ್ಣುಗಳಿಂದ ತಯಾರಿಸಿದ ಬೃಹತ್ ಹಾರ, ಹಸಿರು ಗಾಜಿನ ಬಳೆ ಹಾರ ಮತ್ತು ತಾವರೆ ಹೂ ಹಾರಗಳಿಂದ ಅಲಂಕಾರಗೊಂಡ ದೇವರ ಮೂರ್ತಿಗಳನ್ನು ನೋಡಿ ಭಕ್ತರು ಕಣ್ತುಂಬಿಕೊಂಡರು.