

ಶ್ರೀರಂಗಪಟ್ಟಣ: ಜ.26 ರಿಂದ 3 ದಿನಗಳ ಕಾಲ ದುರ್ದಂಡೇಶ್ವರ ಮಹಂತ ಶಿವಯೋಗಿ ಶ್ರೀಗಳ 130ನೇ ಜಯಂತಿ ಹಾಗೂ ಚಂದ್ರವನ ಆಶ್ರಮದ ಪೀಠಾಧಿಪತಿ ಡಾ.ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳ 25ನೇ ಪಟ್ಟಾಧಿಕಾರ ರಜತ ಮಹೋತ್ಸವ ಸಂಭ್ರಮದಿಂದ ನಡೆಯಲಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಪಟ್ಟಣದ ಪೂರ್ವವಾಹಿನಿಯ ಚಂದ್ರವನ ಆಶ್ರಮದಲ್ಲಿ ಗುರುವಾರ ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳ ಸಾನ್ನಿಧ್ಯದಲ್ಲಿ ಶ್ರೀಮಠದ ಅಂಗಳದಲ್ಲಿ ಪ್ರಗತಿಯಲ್ಲಿರುವ ವೇದಿಕೆ ನಿರ್ಮಾಣ ಹಾಗೂ ಪೂರ್ವಭಾವಿ ಸಿದ್ಧತೆ ಪರಿಶೀಲಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚಂದ್ರವನ ಆಶ್ರಮ ಮತ್ತು ಸ್ವಾಮೀಜಿ ಸಮಾಜದ ಏರಿಳಿತಗಳ ಸಮಯದಲ್ಲಿ ಜತೆಗಿದ್ದು ಸೇವೆ ನೀಡುವ ಜತೆಗೆ ನ್ಯೂನ್ಯತೆಗಳನ್ನು ತಿದ್ದುವಲ್ಲಿ ಮರಿದೇವರು ಶ್ರೀಗಳ ಪಾತ್ರ ಅಗ್ರಗಣ್ಯ. ಹಿರಿಯ ಶ್ರೀಗಳ ಹಾದಿಯಲ್ಲೇ ತ್ರಿನೇತ್ರ ಶ್ರೀಗಳ ಸೇವೆ ಕೊಡುಗೆ ಅನನ್ಯ. ಈ ಹಿಂದೆಯಿಂದಲೂ ಬೇಬಿ ಮಠ ಹಾಗೂ ಕಾವೇರಿ ತೀರದ ಚಂದ್ರವನ ಮಠದೊಂದಿಗೆ ನಾನು ಉತ್ತಮ ಬಾಂಧವ್ಯ ಹೊಂದಿದ್ದು, ಹಿರಿಯ ಗುರುಗಳ 130ನೇ ಜಯಂತಿ ಹಾಗೂ ತ್ರಿನೇತ್ರ ಶ್ರೀಗಳ 25ನೇ ವರ್ಷದ ಪಟ್ಟಾಧಿಕಾರವನ್ನು ವಿಜೃಂಭಣೆಯಿಂದ ಅರ್ಥ ಪೂರ್ಣವಾಗಿ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಮಠಗಳ ಮಠಾಧೀಶರ ಸಮ್ಮಿಲನದೊಂದಿಗೆ ಸಮಾರೋಪ ಸಮಾರಂಭದಲ್ಲಿ ರಾಜ್ಯದ ರಾಜಕೀಯ ದಿಗ್ಗಜರ ಮಹಾಸಂಗಮವಾಗಲಿದೆ. ಸುತ್ತೂರು ಕ್ಷೇತ್ರದ ವೀರಸಿಂಹಾಸನ ಮಠದ ಜಗದ್ಗುರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಜಗದ್ಗುರು ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಆಗಮಿಸಲಿದ್ದಾರೆ. ಶ್ರೀಮಠದ ಪೀಠಾಧಿಪತಿ ತ್ರಿನೇತ್ರ ಸ್ವಾಮಿಗಳ ಜಲಯೋಗ ಸಾಧನೆಯ ಪುಸ್ತಕ ಸ್ವಾಮೀಜಿಗಳು ಬಿಡುಗಡೆ ಮಾಡಲಿದ್ದಾರೆ.
ಚಂದ್ರವನ ಮಠದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಡಿಎಂಎಸ್ ಆರ್ಯುವೇದ ಆಸ್ಪತ್ರೆಯನ್ನು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು ಉದ್ಘಾಟಿಸಲಿದ್ದಾರೆ. ಶತಾಯುಷಿ ಮರಿದೇವರ ಶಿವಯೋಗ ಚರಿತೆಯ ಕೃತಿಯನ್ನು ಮಾಜಿ ಸಿಎಂ ಹಾಗೂ ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರು ಲೋಕಾರ್ಪಣೆಗೊಳಿಸಲಿದ್ದು, ಇದರೊಂದಿಗೆ ಮಠದ ಆವರಣದಲ್ಲಿ ನೂತನ ನಿರ್ಮಾಣದ ಧ್ಯಾನ ಮಂದಿರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ.
ಈ ಅಪೂರ್ವ ಸಂಗಮಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಶ್ರೀಗಳ ಸಹಸ್ರಾರು ಭಕ್ತರು ಹಾಗೂ ರಾಜಕೀಯ ದಿಗ್ಗಜರ ಅಭಿಮಾನಿಗಳು ಆಗಮಿಸುವ ನೀರಿಕ್ಷೆ ಇದ್ದು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ಡಾ.ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳು ಮಾತನಾಡಿ, ಜ.26ರಂದು ಪ್ರಾತಃ ಕಾಲದಲ್ಲಿ ಶ್ರೀಮಠದಲ್ಲಿ ನವಗ್ರಹ, ಮೃತ್ಯುಂಜಯ ಮತ್ತು ನವದುರ್ಗಿಯರ ಪೂಜೆ, ಪ್ರಧಾನ ಕಳಸ ಕಾರ್ಯ ಆರಂಭಿಸಲಾಗುತ್ತಿದ್ದು, ನಂಜನಗೂಡಿನ ಬಸವನಪುರದ ಮಲ್ಲನಮೂಲೆ ಮಠದ ಶ್ರೀಚೆನ್ನಬಸವ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನಡೆಸಿ ಚಾಲನೆ ನೀಡಲಿದ್ದಾರೆ.
ವಿಜಯಪುರದ ಸಿದ್ದಲಿಂಗೇಶ್ವರ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಆಧ್ಯಾತ್ಮಿಕ ಪ್ರವಚನ ನೀಡಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಯ ಸಂತರ ಸಮಾಗಮದ ಜತೆಗೆ ಶನಿವಾರ ಗೋಧೂಳಿ ಸಮಯದಲ್ಲಿ ಕಾವೇರಿ ದೀಪಾರತಿ ಹಾಗೂ ಹುಣ್ಣಿಮೆ ಕಾರ್ಯಕ್ರಮ ನಡೆಯಲಿದೆ. ಶ್ರೀಮಠದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಗೀತ ಮನೋರಂಜನೆ ನೀಡಲಿದ್ದು, ವೈಭವದ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.
ಪುರಸಭಾ ಸದಸ್ಯ ಗಂಜಾಂ ಕೃಷ್ಣಪ್ಪ, ಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಮತ್ತಿತರರು ಹಾಜರಿದ್ದರು.