2 ತಿಂಗಳ ನಂತರ ದಾವಣಗೆರೆಗೆ ಪ್ರಯಾಣಿಕ ರೈಲು ಬಂತು

DVG Railway Station 22 MAY 20
Published on

ದಾವಣಗೆರೆ : ಬರೋಬ್ಬರಿ 2 ತಿಂಗಳ ನಂತರ ಶುಕ್ರವಾರ ದಾವಣಗೆರೆ ನಿಲ್ದಾಣಕ್ಕೆ ಪ್ರಯಾಣಿಕ ರೈಲು ಆಗಮಿಸಿತು. ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ರೈಲು ಬಿಡಲಾಗಿತ್ತು.

ಬೆಂಗಳೂರಿನಿಂದ 350 ಪ್ರಯಾಣಿಕರೊಂದಿಗೆ ಹೊರಟ ಈ ರೈಲು (06597) ಮಾರ್ಗಮಧ್ಯೆ ವಿವಿಧ ನಿಲ್ದಾಣಗಳ ಮೂಲಕ ಹಾದು ಮಧ್ಯಾಹ್ನ 1.18ಕ್ಕೆ ದಾವಣಗೆರೆ ರೈಲು ನಿಲ್ದಾಣವನ್ನು ತಲುಪಿತು. 2 ನಿಮಿಷ ನಿಂತಿದ್ದ ರೈಲು ಬೆಳಗಾವಿ ಕಡೆಗೆ ಪ್ರಯಾಣ ಬೆಳೆಸಿತು.
ಈ ರೈಲಿನಲ್ಲಿ ಕುಳಿತುಕೊಂಡು ಹೋಗುವ ಸೀಟುಗಳ ವ್ಯವಸ್ಥೆಯಿತ್ತು. ಸ್ಲೀಪರ್ ಕೋಚ್‌ಗಳು ಇರಲಿಲ್ಲ. ಪ್ರಯಾಣಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದರು. ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡಿದವರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿತ್ತು. ಅಲ್ಲದೇ ಪ್ರಯಾಣಿಕರನ್ನು ಕಳಿಸಲು ಬರುವವರಿಗೆ ನಿಲ್ದಾಣದೊಳಗೆ ಪ್ರವೇಶ ಇರಲಿಲ್ಲ.

ಬೆರಳೆಣಿಕೆಯಷ್ಟು ಜನ ಮಾತ್ರ ದಾವಣಗೆರೆಯಿಂದ ರೈಲು ಹತ್ತಿದರು. ಬೆಂಗಳೂರು ಕಡೆಯಿಂದ ಬಂದ ಕೆಲವು ಪ್ರಯಾಣಿಕರು ಇಲ್ಲಿ ಇಳಿದರು. ವಿಶೇಷ ರೈಲು ಸಂಚಾರದ ಹಿನ್ನೆಲೆಯಲ್ಲಿ ನಿಲ್ದಾಣದ ಆವರಣದಲ್ಲಿ ರೈಲ್ವೆ ಮತ್ತು ಸಿವಿಲ್ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಕೌಂಟರ್ ಇನ್ನಿತರ ಕಡೆಗಳಲ್ಲಿ ಸ್ವಚ್ಛತೆ ಕೈಗೊಂಡು ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗಿತ್ತು. ಕೆಲವು ಪ್ರಯಾಣಿಕರು ಮಾಸ್ಕ್, ಸ್ಯಾನಿಟೈಸರ್ ಮತ್ತು ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಬಂದಿದ್ದರು.

ಮುಂಗಡ ಬುಕಿಂಗ್ ಕೌಂಟರ್ ಆರಂಭ: ದಾವಣಗೆರೆ ರೈಲು ನಿಲ್ದಾಣದಲ್ಲಿ ಶುಕ್ರವಾರ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ ತೆರೆಯಲಾಯಿತು. ಮೇ 31ರ ವರೆಗೆ ಈ ಹಿಂದೆ ಕಾಯ್ದಿರಿಸಿದ್ದ ಎಲ್ಲ ಟಿಕೆಟ್‌ಗಳನ್ನೂ ರದ್ದು ಮಾಡಲಾಗಿದೆ. ಜೂನ್ 1ರ ನಂತರದ ಪ್ರಯಾಣಕ್ಕೆ ಮಾತ್ರ ಈಗ ಮುಂಗಡ ಟಿಕೆಟ್ ನೀಡುವ ವ್ಯವಸ್ಥೆಯಾಗಿದೆ. ಕೌಂಟರ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. 4 ಮಂದಿ ಮಾತ್ರ ಸಾಲಿನಲ್ಲಿ ನಿಲ್ಲಲು ಅವಕಾಶವಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net