

ಹೊಳೆನರಸೀಪುರ: ಟೆಲಿಕಾಂ ಭದ್ರತೆ ಮತ್ತು ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿನ ಅಪಾರ ಜ್ಞಾನದಿಂದ ಸೌದಿ ಅರೇಬಿಯಾ ಸರ್ಕಾರದ ಗಮನ ಸೆಳೆದಿರುವ ತಾಲೂಕಿನ ಕಾಮಸಮುದ್ರ ಗ್ರಾಮದ ವಿಜಯಕುಮಾರ್ ಗೌಡ ಅಲ್ಲಿನ ಸರ್ಕಾರದ ಆಹ್ವಾನದ ಮೇಲೆ ರಿಯಾದ್ ನಲ್ಲಿ ನಡೆದ ಬ್ಲಾಕ್ ಹ್ಯಾಕ್ ಮಿಡಲ್ ಈಸ್ಟ್ ಆಫ್ರಿಕಾ ಸಮಾವೇಶದಲ್ಲಿ ಇತ್ತೀಚೆಗೆ ಭಾಗವಹಿಸಿದರು.
ತಾಲೂಕಿನ ಕಾಮಸಮುದ್ರ ಗ್ರಾಮದ ಕೃಷ್ಣಕುಮಾರ್ ಹಾಗೂ ಶಿಕ್ಷಕಿ ಬಿಂದು ಅವರ ಪುತ್ರ ವಿಜಯಕುಮಾರ್ ಗೌಡ ಬೆಂಗಳೂರಿನ ಆರ್.ವಿ. ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮೇನೇಜ್‌ಮೆಂಟ್ 7ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಟೆಲಿಕಾಂ ಭದ್ರತೆ ಹಾಗೂ ಸೈಬರ್ ಸೆಕ್ಯೂರಿಟಿ ಬಗ್ಗೆ ವಿವರಿಸಲು ತೆರಳಿರುವ ಭಾರತದ ಏಕೈಕ ಪ್ರತಿನಿಧಿ ವಿಜಯಕುಮಾರ್ ಆಗಿದ್ದಾನೆ.
100ಕ್ಕೂ ಹೆಚ್ಚು ದೇಶಗಳ 40 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದ ಸಮಾವೇಶದಲ್ಲಿ ರೆಸ್ಲಾಯಿಟ್ ಅಂಡಸ್ಟಾೃಂಡಿಂಗ್ ಟೆಲಿಕಾಂ ನೆಟ್ವರ್ಕ್ ಅಂಡ್ ಅನಲೈಜಿಂಗ್‌ದ ಸೆಕ್ಯೂರಿಟ್ ಆಫ್ ಕೋರ್ ನೆಟ್ವಕ್ಸ್ಸ್ ಇನ್ ಎ ಟೆಲಿಕಾಂ ಡೆಪ್ಲಾಯ್ಮೆಂಟ್ ಕುರಿತು ವಿಷಯ ಮಂಡಿಸಿದ್ದಾರೆ.
ಇದಲ್ಲದೆ ಕೃತಕಬುದ್ಧಿಮತ್ತೆ (ಆರ್ಟಿಫಿಸಿಯಲ್ ಇಂಟೆಲಿಜೆನ್ಸ್) ಬಗ್ಗೆ ಹಲವಾರು ಪ್ರೋಗ್ರಾಂಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ತಮ್ಮ ವೆಬ್‌ಸೈಟ್‌ನಲ್ಲಿ ಮಂಡಿಸುತ್ತಿದ್ದ ವಿಷಯಗಳನ್ನು ಗಮನಿಸುತ್ತಿದ್ದ ಸೌದಿ ಅರೆಬಿಯಾ ಸರ್ಕಾರ ವಿಜಯಕುಮಾರ್ ಗೌಡ ಅವರನ್ನು ಆಹ್ವಾನಿಸಿ ಉಚಿತ ವಿಸಾ ಕಳುಹಿಸಿ ವಿಷಯ ಮಂಡನೆಗೆ ಅವಕಾಶ ನೀಡಿದೆ. ವಿಷಯ ಮಂಡಿಸಿದ ವಿಜಯಕುಮಾರ್ ಗೌಡ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.