

ವಿರಾಜಪೇಟೆ: ಸಣ್ಣ ಜನಾಂಗವಾದರೂ ವಿಶೇಷವಾಗಿ ಗುರುತಿಸಿಕೊಂಡು ಆಚಾರ, ವಿಚಾರ ಸಂಸ್ಕೃತಿಗಳನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಸಮುದಾಯವೇ ಕೊಡವ ಮುಸ್ಲಿಂ ಸಮುದಾಯ ಎಂದು ಶಾಸಕ ಎ.ಎಸ್.ಪೊನ್ನಣ್ಣ ಬಣ್ಣಿಸಿದರು.
ವಿರಾಜಪೇಟೆಯ ಸೇಂಟ್ ಆನ್ಸ್ ಪ್ಯಾರಿಸ್ ಹಾಲ್ ಸಭಾಂಗಣದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಕೆಎಂಎ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡವ ಮುಸ್ಲಿಂ ಸಮುದಾಯ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯ. ಶೈಕ್ಷಣಿಕ ಸಾಮಾಜಿಕ ಗಣತಿಯಲ್ಲಿ ಎಲ್ಲರೂ ತಪ್ಪದೆ ಭಾಗವಹಿಸಬೇಕು. ಇದರಿಂದ ನಿಜವಾದ ಹಿಂದುಳಿದ ವರ್ಗದವರನ್ನು ಗುರುತಿಸಲು ಸಹಕಾರಿಯಾಗಲಿದೆ. ವೈಜ್ಞಾನಿಕವಾಗಿ ಸಮಸ್ಯೆಗಳ ಪರಿಹಾರ ಹಾಗೂ ಕಾನೂನು ನೀತಿ ರೂಪಿಸಲು, ಅಗತ್ಯ ಮೀಸಲಾತಿ ನೀಡಲು ಸಾಧ್ಯವಾಗುತ್ತದೆ ಎಂದರು.
ಅರಮೇರಿ ಕಳಂಕೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹೆಣ್ಣು ಮಕ್ಕಳೆ ಹೆಚ್ಚಿನ ಅಂಕ ಗಳಿಸಿರುವುದು ಮೆಚ್ಚುಗೆಯ ವಿಷಯ. ತಾಯಿ ಮನಸ್ಸು ಮಾಡಿದರೆ ಮಕ್ಕಳು ಎತ್ತರಕ್ಕೆ ಏರುವುದು ಸಾಧ್ಯ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಈ ರೀತಿಯ ಅವಕಾಶ ಇರಲಿಲ್ಲ. ಆದರೆ, ಇಂದು ಸಾಮಾಜಿಕ ವ್ಯವಸ್ಥೆಯ ಮುಂಚೂಣಿಯಲ್ಲಿ ಹೆಣ್ಣು ಮಕ್ಕಳು ಇರುವುದಕ್ಕೆ ಶಿಕ್ಷಣವೇ ಕಾರಣ ಎಂದರು.
ಹೈಕೋರ್ಟ್ ವಕೀಲ ಕುವೇಂಡ.ಎಚ್.ಹಿದಾಯತುಲ್ಲಾ ಮಾತನಾಡಿ, ವಿಶೇಷ ಸಂಸ್ಕೃತಿ ಹಾಗೂ ಧಾರ್ಮಿಕತೆ ನಮ್ಮ ಸಮುದಾಯ ಪಾಲಿಸಿಕೊಂಡು ಬರುತ್ತಿದೆ. ಪ್ರೀತಿ, ಮಾನವೀಯತೆ ತೋರುವ ಜನಾಂಗವಾಗಿ ಗುರುತಿಸಿಕೊಂಡಿದೆ. ಜತೆಗೆ ಶ್ರೇಷ್ಠತೆ ಹಾಗೂ ಒಗ್ಗಟ್ಟಿಗೂ ಹೆಸರಾಗಿದೆ. ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದರೆ ನಮ್ಮ ಸಮುದಾಯ ಮತ್ತಷ್ಟು ಗಟ್ಟಿಯಾಗುತ್ತದೆ. ಹಾಗಾಗಿ, ಯಾವುದೇ ಅಡೆತಡೆ ಇದ್ದರೂ ವಿದ್ಯಾರ್ಥಿಗಳು ವಿಚಲಿತವಾಗದೆ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು. ಸರ್ಕಾರ ನಡೆಸುತ್ತಿರುವ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆಯಲ್ಲಿ ಕೊಡವ ಮುಸ್ಲಿಂ ಎಂದು ದಾಖಲಿಸಿ ಎಂದರು.
ಸಮಾರಂಭದಲ್ಲಿ 29 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶತಾಯುಷಿ ಕೂವಲೇರ ಹುಸೇನ್ ಹಾಜಿ ಹಾಗೂ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು.
ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿ ಹಾಜಿ, ಶಿಕ್ಷಣ ತಜ್ಞ ಮೈಸೂರಿನ ಆರ್.ಎ.ಚೇತನರಾಮ್, ಎ.ಅನೀಫ್ ಸಮಿತಿಯ ಹಿರಿಯ ಉಪಾಧ್ಯಕ್ಷ ಡಾ.ಜೋಯಿಪೆರ ಎ ಕುಞಬ್ದುಲ್ಲಾ, ಉಪಾಧ್ಯಕ್ಷ ಅಕ್ಕಳತಂಡ ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್, ತೂಚಮಕೇರಿ ಸಮಿತಿಯ ಕೋಶಾಧಿಕಾರಿ ಹರಿಶ್ಚಂದ್ರ, ಎ .ಹಂಸ ಇತರರು ಇದ್ದರು.